ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ನೀಡಿ

53
Published on

ಚನ್ನಗಿರಿ: ಅರಣ್ಯ ಹಕ್ಕು ಕಾಯ್ದೆ 2006ರ ಅಡಿ ಅರಣ್ಯ ಹಕ್ಕುಗಳ ಜಾಗೃತಿ ಮೂಡಿಸಿ ಕಾಯ್ದೆಯ ನಿಯಮಾವಳಿ ಹಾಗೂ ಸರ್ಕಾರ ಮತ್ತು ಇಲಾಖೆಯ ಆದೇಶದನ್ವಯ ಅರ್ಜಿದಾರರ ಪ್ರಕ್ರಿಯೆ ಕೂಡಲೇ ಇತ್ಯರ್ಥಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯಿಂದ ತಹಸೀಲ್ದಾರ್ ಪಿ.ಎಸ್. ಯರ‌್ರಿಸ್ವಾಮಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಜಿಲ್ಲಾ ಸಂಚಾಲಕ ಕೆ.ಬಿ. ರೂಪನಾಯ್ಕ, ದಾವಣಗೆರೆ ಜಿಲ್ಲೆ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ ಅರಣ್ಯ ಮತ್ತು ಬಗರ್ ಹುಕುಂ ಸಾಗುವಳಿದಾರರು ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದರೂ ಇದುವರೆಗೆ ಹಕ್ಕುಪತ್ರ ಸಿಕ್ಕಿಲ್ಲ. ಅರಣ್ಯ ಹಕ್ಕು ಸಮಿತಿಗಳಿಗೆ ಅರಣ್ಯ ಹಕ್ಕುಗಳ ಮಾನ್ಯತೆ ಕುರಿತು ತಿಳಿವಳಿಕೆ ಇಲ್ಲದೆ ಕಾಯ್ದೆ ಪ್ರಕ್ರಿಯೆ ಸರಿಯಾಗಿ ನಡೆಯದ ಕಾರಣ ಅರ್ಜಿದಾರರ ಅರ್ಜಿಗಳು ತಿರಸ್ಕೃತಗೊಂಡಿವೆ. ಇದರಿಂದ ಅರ್ಜಿದಾರರು ಜೀವನೋಪಾಯ ಮತ್ತು ಅಹಾರ ಭದ್ರತೆಯ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದರು.

ಕಾಯ್ದೆಯ ನಿಯಮಾವಳಿ 12 ರಲ್ಲಿರುವ ಪ್ರಕ್ರಿಯೆ ಅನುಸರಿಸಬೇಕು, ನಮೂದಿಸಿದ ಎರಡು ಸಾಕ್ಷಿಗಳನ್ನು ಪರಿಗಣಿಸಬೇಕು, ಪಾರಂಪರಿಕ ಅರಣ್ಯವಾಸಿಗಳ ಅರ್ಜಿಗಳಿಗೆ ನೋಟರಿಯವರ ಮೂಲಕ ಅಂಗೀಕೃತ ಹಿರಿಯರ ಹೇಳಿಕೆಯು 13 ಡಿಸೆಂಬರ್ 2005 ಕ್ಕಿಂತ ಪೂರ್ವ ಮೂರು ತಲೆಮಾರಿನಿಂದ ಇರುವಂತವರನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net