

ಚಿತ್ರದುರ್ಗ: ಐವತ್ತೈದು ಶಾಸಕರು ಮಾರಾಟಕ್ಕೆ ಸಿದ್ಧರಿದ್ದಾರೆ ಎಂಬ ಸಂದೇಶವನ್ನು ಹುನಗುಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಕೊಟ್ಟಿದ್ದಾರೆಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಇಡಿ ಮೂಲಕ ಟಾರ್ಗೆಟ್ ಮಾಡುತ್ತಿದೆ ಎಂದು ಕಾಶಪ್ಪನವರ್ ಹೇಳಿಕೆ ಕೊಟ್ಟಿದ್ದಾರೆ. ಮೊದಲು ಅವರು ಶಾಸಕರ ಪಟ್ಟಿ ಬಿಡುಗಡೆ ಮಾಡಲಿ ಎಂದು ಸವಾಲೆಸೆದ ಸಂಸದರು, ಕುರಿ ಸಂತೆಯಲ್ಲಿ ಯೋಗ್ಯ ಕುರಿ ನೋಡಿ ಖರೀದಿ ನಡೆಯುತ್ತದೆ. ಸಾಮಾಜಿಕ ಕಳಕಳಿ, ಸೇವಾ ಮನೋಭಾವವಿರುವಂಥ ಕುರಿ ಇದ್ದರೆ ಖಂಡಿತಾ ಖರೀದಿಸುವುದಾಗಿ ಕಾಶಪ್ಪನವರ್ ಹೇಳಿಕೆಗೆ ತಿರುಗೇಟು ನೀಡಿದರು.
ಶಿವಮೊಗ್ಗ ಜಿಲ್ಲೆ ಸಿಗಂದೂರು ಸೇತುವೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿಲ್ಲ ಎಂಬ ಟೀಕೆ ಸರಿಯಲ್ಲ. ಸೇತು ವೆ ಉದ್ಘಾಟನಾ ಸಮಾರಂಭಕ್ಕೆ ಶಿವಮೊಗ್ಗದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಪ್ರಧಾನಿ ಆಗಮಿಸಿದರೆ ಅಂಥ ಸಮಾರಂಭದ ಅಧ್ಯಕ್ಷತೆಯನ್ನು ಸಿಎಂ ವಹಿಸಬೇಕಾಗುತ್ತದೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ. ಸಮಾರಂಭ ಮುಂದೂಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದಿರುವ ಸಿಎಂ ನಡೆಯನ್ನು ವಿರೋಧಿಸಿದರು. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲಿ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. ಚಿತ್ರದುರ್ಗದಲ್ಲೇ ನನ್ನನ್ನು ಆಹ್ವಾನಿಸದೆ 198 ಕಾರ್ಯಕ್ರಮಗಳನ್ನು ಮಾಡಲಾಗಿದೆ. ಇದನ್ನು ಖಂಡಿಸಿ ಡಿಸಿ, ಸಿಎಸ್‌ಗೆ ಪತ್ರ ಬರೆದಿದ್ದೇನೆ ಎಂದರು.
ಹಕ್ಕು ಪತ್ರ ವಿತರಿಸಲಿ: ಚಿತ್ರದುರ್ಗ ಜಿಲ್ಲೆಯಲ್ಲಿ 60 ಸಾವಿರಕ್ಕೂ ಹೆಚ್ಚು ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಟ್ಟಿಲ್ಲ. ಸಂಬಂಧಿಸಿದ ಶಾಸಕರು ಬಗರ್‌ಹುಕುಂ ಕಮಿಟಿ ಮೀಟಿಂಗ್ ಮಾಡದಿರುವುದೇ ಇದಕ್ಕೆ ಕಾರಣ ಎಂದು ಸಂಸದ ಗೋವಿಂದ ಎಂ. ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು.
ಶೇ.60-70 ಎಸ್‌ಸಿ, ಎಸ್‌ಟಿ ಸೇರಿ ಹಲವು ವರ್ಷಗಳಿಂದ ಸರ್ಕಾರಿ ೂಮಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಬಡ ರೈತರಿಗೆ ಹಕ್ಕು ಪತ್ರ ಕೊಡಬೇಕಿದೆ. ಆದ್ದರಿಂದ ಇನ್ನು 15 ದಿನದೊಳಗೆ ಶಾಸಕರು ಸಭೆ ನಡೆಸಿ ಬಡವರಿಗೆ ಭೂಮಿ ಮಂಜೂರಿಗೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಮುಂದಾಗಬೇಕು ಎಂದು ಆಗ್ರಹಿಸಿದರು.