ಬಗರ್​ಹುಕುಂಗೆ ವಿಲೇವರಿ: ಸಮಿತಿ ರಚನೆಗೆ ಶಾಸಕರ ನಿರ್ಲಕ್ಷ್ಯ, ಲಕ್ಷಾಂತರ ಅರ್ಜಿಗೆ ಗ್ರಹಣ

Front Lead F
Published on

| ಸೋರಲಮಾವು ಶ್ರೀಹರ್ಷ ತುಮಕೂರು

ಬಗರ್​ಹುಕುಂ ಯೋಜನೆ ಮೇಲೆ ಕವಿದಿರುವ ಗ್ರಹಣ ಸದ್ಯಕ್ಕಂತೂ ಸರಿಯುವ ಲಕ್ಷಣ ಕಾಣುತ್ತಿಲ್ಲ. ಸಾಗುವಳಿ ಭೂಮಿಯ ಸಕ್ರಮಕ್ಕೆ ಕಾದು ಸುಸ್ತಾಗಿರುವ ರಾಜ್ಯದ ರೈತರು ಅತ್ತ ಹಕ್ಕುಪತ್ರ ಇಲ್ಲದೆ ಇತ್ತ ಸರ್ಕಾರಿ ಸೌಲಭ್ಯಗಳನ್ನೂ ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಾಸಕರ ನೇತೃತ್ವದ ಬಗರ್​ಹುಕುಂ ಸಮಿತಿ ರಚನೆಯಾಗದ ಪರಿಣಾಮ ಲಕ್ಷಾಂತರ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವುದೇ ಈ ಸಮಸ್ಯೆಗೆ ಮೂಲ ಕಾರಣ.

ರಚನೆಯಾಗದ ಸಮಿತಿ: ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಬಗರ್​ಹುಕುಂ ಯೋಜನೆ ಅಡಿ ಸಾಗುವಳಿ ಭೂಮಿಯ ಸಕ್ರಮಕ್ಕೆ ಸರ್ಕಾರ ಮುಂದಾಗಿದೆ. ಭೂ ಕಂದಾಯ ಕಾಯ್ದೆ ಪ್ರಕಾರ ತಾಲೂಕುವಾರು ಶಾಸಕರ ನೇತೃತ್ವದಲ್ಲಿ ಬಗರ್​ಹುಕುಂ ಸಮಿತಿ ರಚಿಸಿ ಅರ್ಜಿ ವಿಲೇವಾರಿ ಮಾಡಬೇಕು. ಆದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈವರೆಗೆ ಶಾಸಕರ ನೇತೃತ್ವದಲ್ಲಿ ಸಮಿತಿ ರಚನೆಯಾಗದ ಹಿನ್ನೆಲೆಯಲ್ಲಿ ಲಕ್ಷಾಂತರ ಅರ್ಜಿಗಳು ವಿಲೇವಾರಿಯಾಗಿಲ್ಲ. ಪ್ರತಿ ಅಧಿವೇಶನ ಸಂದರ್ಭದಲ್ಲೂ ಬಗರ್​ಹುಕುಂ ಅರ್ಜಿಗಳನ್ನು ಪೂರ್ಣವಾಗಿ ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ಸಕ್ರಮ ಮಾಡಿಕೊಡಬೇಕೆಂಬ ಚರ್ಚೆ ಮುನ್ನೆಲೆಗೆ ಬರುತ್ತದೆ. ಆದರೆ ಸದನದಲ್ಲಿ ತಲೆ ಆಡಿಸುವ ಶಾಸಕರು ಕ್ಷೇತ್ರಕ್ಕೆ ಹೋದ ನಂತರ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ.

ಚುನಾವಣೆ ವೇಳೆ ಅರ್ಜಿ ವಿಲೇವಾರಿ ಮಾಡುತ್ತೇವೆ ಎನ್ನುವ ಜನಪ್ರತಿನಿಧಿ ಗಳು ಗೆದ್ದ ನಂತರ ವಿಷಯ ಮರೆಮಾಚುತ್ತಾರೆ. ಜತೆಗೆ, ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಿ ಅರ್ಜಿಗಳ ಇತ್ಯರ್ಥಕ್ಕೆ ಮುಂದಾದಲ್ಲಿ ಬಹುತೇಕ ಅರ್ಜಿಗಳು ತಿರಸ್ಕೃತವಾಗುವ ಸಾಧ್ಯತೆ ಇರುವುದರಿಂದ, ರೈತರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಶಾಸಕರು ಸಮಿತಿ ರಚನೆ, ಸಭೆಗಳ ಬಗ್ಗೆ ತಾತ್ಸಾರ ತೋರುತ್ತಿದ್ದಾರೆಂಬ ಚರ್ಚೆಯೂ ಇದೆ.

ಸಚಿವರಿಗೆ ಮರುಜನ್ಮ: ಸತತ 2 ಚುನಾವಣೆಗಳಲ್ಲಿ ಸೋತು ರಾಜಕೀಯ ಹಿನ್ನಡೆ ಅನುಭವಿಸಿದ್ದ ಜೆ.ಸಿ. ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿಯಲ್ಲಿ ಬಗರ್​ಹುಕುಂ ಕುರಿತ ರೈತಪರ ಹೋರಾಟಗಳಿಂದಲೇ ಗೆಲುವು ಸಾಧಿಸಿದರು. ಸದ್ಯ ಕಾನೂನು ಸಚಿವರಾಗಿರುವ ಅವರು ರೈತರ ಋಣ ತೀರಿಸುವ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು. ಎಲ್ಲ ಬಗರ್​ಹುಕುಂ ಅರ್ಜಿಗಳ ವಿಲೇವಾರಿ ಸ್ಥಗಿತವಾಗಿರುವುದನ್ನು ಪ್ರಶ್ನಿಸಿ, ಸೂಕ್ತ ಕ್ರಮವಹಿಸಿದರೆ ರೈತರಿಗೆ ನೆರವಾಗುತ್ತದೆ ಎಂಬುದು ತುಮಕೂರು ಜಿಲ್ಲೆಯ ರೈತರ ಅಭಿಪ್ರಾಯ.

ಸೌಲಭ್ಯಗಳು ಮರೀಚಿಕೆ

ಬಗರ್​ಹುಕುಂ ಅರ್ಜಿ ವಿಲೇವಾರಿ ಸಮಸ್ಯೆಯಿಂದಾಗಿ ರೈತರು ಸರ್ಕಾರಿ ಭೂಮಿಯಲ್ಲಿ ಬೆಳೆದ ಬೆಳೆಗಳಿಗೆ ವಿಮೆ ಮಾಡಿಸಲು, ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಹೆಸರು ಸೇರ್ಪಡೆ ಮಾಡಲು, ಎಪಿಎಂಸಿಯಲ್ಲಿ ಬೆಳೆ ಮಾರಾಟ ಮಾಡಲು, ಬ್ಯಾಂಕ್ ಸಾಲ, ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸುವುದಕ್ಕೆ ಅವಕಾಶ ಇಲ್ಲದಂತಾಗಿದೆ. ತಲೆಮಾರುಗಳಿಂದ ಉಳುಮೆ ಮಾಡುತ್ತಿದ್ದರೂ ಅದರ ಮೇಲೆ ಯಾವುದೇ ಹಕ್ಕಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ‘ದೇವರು ಕೊಟ್ಟರೂ, ಪೂಜಾರಿ ಕೊಡಲಿಲ್ಲ’ ಎಂಬಂತೆ ಸರ್ಕಾರ ಯೋಜನೆ ಜಾರಿ ಮಾಡಿದರೂ ಶಾಸಕರ ನಿರ್ಲಕ್ಷ್ಯದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಸಕ್ರಮ ಗೊಂದಲ

ರಾಜ್ಯ ಸರ್ಕಾರ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಬಗರ್​ಹುಕುಂ ಸಕ್ರಮ ಯೋಜನೆ ಅಡಿ ಗೋಮಾಳಗಳನ್ನು (ಫಾರಂ ನಂ.50) ರೈತರಿಗೆ ಕೊಡಲು ಮುಂದಾಯಿತು. 2000ರಲ್ಲಿ ಮತ್ತೊಮ್ಮೆ ಕಾಯ್ದೆಗೆ ತಿದ್ದುಪಡಿ ಮಾಡಿ ಸೊಪ್ಪಿನಬೆಟ್ಟ, ಕಾನು, ಬಾನೆ, ಜಿಮ್ಮಾ ಬಾನೆ, ಕುಮ್ಕಿ, ಬೆಟ್ಟ ಭೂಮಿಗಳ ಬಗರ್ ಹುಕುಂ ಸಕ್ರಮೀಕರಣಕ್ಕೆ (ಫಾರಂ ನಂ.53) ಅವಕಾಶ ನೀಡಿತು. ಆದರೆ, 2010ರಲ್ಲಿ ವಿಶೇಷ ಹಕ್ಕುಗಳುಳ್ಳ ಭೂಮಿಯನ್ನು ಅರಣ್ಯ ಭೂಮಿ ಎಂದು ಘೊಷಿಸಿ, ಬಗರ್​ಹುಕುಂನಡಿ ಮಂಜೂರಾತಿಗೆ ನಿರಾಕರಿಸಿತು. ಪುನಃ ಕೆಲವು ಮಾರ್ಪಾಡಿನೊಂದಿಗೆ (ಫಾರಂ ನಂ-57) ಅರ್ಜಿ ಸಲ್ಲಿಕೆಗೆ ಅವಕಾಶ ಕೊಟ್ಟಿದೆ. ಈ ಗೊಂದಲ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಹೊಸದಾಗಿ 94 ಸಾವಿರ ಅರ್ಜಿ ಬಂದಿದ್ದವು. ಕಳೆದೊಂದು ವರ್ಷದಿಂದ ವಿಲೇವಾರಿ ಸಾಧ್ಯವಾಗಿಲ್ಲ. 15 ಸಾವಿರ ಅರ್ಜಿ ಬಾಕಿ ಇದೆ. ನಾವು ಬಗರ್​ಹುಕುಂ ಸಮಿತಿ ರಚಿಸಲು ಸಾಧ್ಯವಿಲ್ಲ. ಸರ್ಕಾರವೇ ರಚಿಸಬೇಕಿದೆ. ಪ್ರಸ್ತುತ 3 ತಾಲೂಕಿನಲ್ಲಿ ರಚನೆಯಾಗಿದೆ. ಪ್ರತಿವಾರ ಸಭೆ ನಡೆದರೆ ಅರ್ಜಿಗಳು ವಿಲೇವಾರಿಯಾಗಲಿವೆ.| ಡಾ.ಕೆ.ರಾಕೇಶ್​ಕುಮಾರ್ ತುಮಕೂರು ಜಿಲ್ಲಾಧಿಕಾರಿಹಲವು ವರ್ಷದಿಂದ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ದಾಖಲೆಗಳಿಲ್ಲದೆ ಸರ್ಕಾರದ ಸೌಲಭ್ಯ ಪಡೆಯಲು ರೈತರು ಪರದಾಡುತ್ತಿದ್ದಾರೆ. ಕೂಡಲೇ ಸಮಿತಿ ರಚಿಸಿ ಅರ್ಜಿ ವಿಲೇವಾರಿ ಮಾಡಬೇಕು.| ಕೆಂಕೆರೆ ಸತೀಶ್ ರಾಜ್ಯ ಉಪಾಧ್ಯಕ್ಷ, ರಾಜ್ಯ ರೈತ ಸಂಘ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net