ಎಸ್‌ಒಪಿ ಪ್ರಕಾರ ಪರೀಕ್ಷೆಗೆ ಸಿದ್ಧತೆ

BKT 131
Published on

ಬಾಗಲಕೋಟೆ: ಜಿಲ್ಲಾದ್ಯಂತ ಜು.19 ಮತ್ತು 22 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿರುವ ಎಸ್‌ಒಪಿ ಅನ್ವಯ ಪರೀಕ್ಷೆ ಸಿದ್ಧತೆಗೆ ಎಲ್ಲ ರೀತಿಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಎಸ್‌ಒಪಿ ಪ್ರಕಾರ ಪರೀಕ್ಷೆ ಕೊಠಡಿಯಲ್ಲಿ ಪ್ರತಿ ಡೆಸ್ಕ್‌ಗೆ ಒಬ್ಬರಂತೆ ಒಟ್ಟು 12 ವಿದ್ಯಾರ್ಥಿಗಳು ಇರಬೇಕು. ಜಿಲ್ಲೆಯಲ್ಲಿ ಒಟ್ಟು 32,805 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 173 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 5355 ಸಿಬ್ಬಂದಿಯನ್ನು ಪರೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ನಕಲು ಮುಕ್ತವಾಗಿ ಪರೀಕ್ಷೆ ನಡೆಸಲು ಸೂಚಿಸಿದರು.

ಪರೀಕ್ಷೆ ಕಾರ್ಯದಲ್ಲಿ ತೊಡಗಿದ ಎಲ್ಲ ಸಿಬ್ಬಂದಿಗೂ ಕೋವಿಡ್ ಲಸಿಕೆ ನೀಡಲಾಗಿದೆ. ಪರೀಕ್ಷೆ ಪೂರ್ವ ಮತ್ತು ನಂತರ ಸೋಂಕು ನಿವಾರಕ ದ್ರಾವಣದಿಂದ ಕೊಠಡಿ, ಪೀಠೋಪಕರಣ ಮತ್ತು ಶೌಚಗೃಹಗಳನ್ನು ಸ್ಯಾನಿಟೈಸರ್ ಮಾಡಲು ಗ್ರಾಮೀಣ ಭಾಗದಲ್ಲಿ ಗ್ರಾಪಂ ಪಿಡಿಒ ಹಾಗೂ ನಗರ ಪ್ರದೇಶದಲ್ಲಿ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಪರೀಕ್ಷೆ ಕೇಂದ್ರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಹಾಗೂ ಕೊಠಡಿ ಪ್ರವೇಶಿಸುವ ಸಮಯದಲ್ಲಿ ಅಂತರ ಪಾಲನೆ ಮಾಡುವುದರ ಜತೆಗೆ ವಿದ್ಯಾರ್ಥಿಗಳ ಕೈಗಳಿಗೆ ಸ್ಯಾನಿಟೈಸರ್ ಮಾಡಲು ತಿಳಿಸಿದರು.

ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಪರೀಕ್ಷೆ ಪ್ರಾರಂಭದ ಪೂರ್ವದಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಪ್ರತಿಯೊಂದು ಪರೀಕ್ಷೆ ಕೇಂದ್ರಕ್ಕೆ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿಗೆ ತಿಳಿಸಿದರು. ತಾಲೂಕಿಗೆ ಒಂದರಂತೆ ತುರ್ತು ಚಿಕಿತ್ಸೆ ವಾಹನ ಪರೀಕ್ಷೆ ದಿನಗಳಂದು ಮೀಸಲಿಡಬೇಕು. ಪರೀಕ್ಷೆ ಕೇಂದ್ರಕ್ಕೆ ಪೊಲೀಸ್ ಸಿಬ್ಬಂದಿ ನೇಮಿಸಲು ಹೇಳಿದರು.

ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವುದನ್ನು ನಿಷೇಧಿಸಿದ್ದು, ಪರೀಕ್ಷೆ ಕೇಂದ್ರದಲ್ಲಿ ಡೆಸ್ಕ್‌ಗಳ ಕೊರತೆ ಇದ್ದಲ್ಲಿ ಹತ್ತಿರದ ಶಾಲೆಯಿಂದ ಪಡೆಯತಕ್ಕದ್ದು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕೈತೊಳೆಯಲು ಸಾಬೂನು ಇಲ್ಲವೇ ಹ್ಯಾಂಡ್‌ವಾಷ್ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳು ತಮ್ಮದೆ ಆದ ನೀರಿನ ಬಾಟಲ್ ತರಲು ಇಚ್ಛಿಸಿದಲ್ಲಿ ಅವಕಾಶ ಕಲ್ಪಿಸಬೇಕು. ಪರೀಕ್ಷೆ ಕೊಠಡಿಗೆ ಕ್ಯಾಲ್ಕುಲೇಟರ್, ಮೊಬೈಲ್, ಸ್ಮಾರ್ಟ್‌ವಾಚ್, ಡಿಜಿಟಲ್ ವಾಚ್ ತರುವುದನ್ನು ನಿಷೇಧಿಸಿದ್ದು, ಮುಖ್ಯ ಅಧೀಕ್ಷಕರು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪರೀಕ್ಷೆಗೆ 80 ವಾಹನಗಳ ವ್ಯವಸ್ಥೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಉಪ ವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಇಳಕಲ್ಲ ಡಯಟ್ ಪ್ರಾಚಾರ್ಯ ಬಿ.ಕೆ.ನಂದನೂರ, ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ, ಖಜಾನೆ ಇಲಾಖೆ ಉಪನಿರ್ದೇಶಕ ಆನಂದ ಮುಚ್ಚಂಡಿ, ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎಸ್.ಎಸ್.ಹಾಲವರ, ವಿಷಯ ನಿರ್ವಾಹಕ ಬಸವರಾಜ ಹಾಲಳ್ಳಿ ಇತರರು ಇದ್ದರು.

ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಬಿರಾದಾರ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಪರೀಕ್ಷೆ ವಿಧಾನವನ್ನು ಸರಳೀಕರಿಸಿ ಎರಡು ದಿನಗಳಿಗೆ ಸೀಮಿತಗೊಳಿಸಿದೆ. ಬಹು ಆಯ್ಕೆ ಪ್ರಶ್ನೆಯ ಮಾದರಿಯ ವಿಷಯವಾರು 40 ಅಂಕಗಳ ಪರೀಕ್ಷೆ ನಡೆಸಲಾಗುತ್ತಿದೆ. ಮೂರು ಭಾಷಾ ವಿಷಯಗಳು ಒಳಗೊಂಡಂತೆ 120 ಅಂಕಗಳ ಒಂದು ಪ್ರಶ್ನೆ ಪತ್ರಿಕೆ ಮತ್ತು ಮೂರು ಕೋರ್ ವಿಷಯಗಳನ್ನು ಒಳಗೊಂಡಂತೆ 120 ಅಂಕಗಳ ಒಂದು ಪ್ರಶ್ನೆ ಪತ್ರಿಕೆ ಒಳಗೊಂಡಿರುತ್ತದೆ. ಈ ಪಶ್ನೆ ಪತ್ರಿಕೆ ಎಲ್ಲ ವಿಧದ ಅಭ್ಯರ್ಥಿಗಳಿಗೂ ಅನ್ವಯಿಸಲಿದೆ. ಪರೀಕ್ಷೆಗಳು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ವರೆಗೆ ನಡೆಯಲಿದೆ. ಜು. 19 ರಂದು ಕೋರ್ ವಿಷಯಗಳನ್ನೊಳಗೊಂಡ ಪತ್ರಿಕೆ ನಡೆದರೆ, ಜು. 22 ರಂದು ಮೂರು ಭಾಷಾ ವಿಷಯಗಳು ಒಳಗೊಂಡ ಪತ್ರಿಕೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.

ಕೋವಿಡ್ ದೃಢಪಟ್ಟ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶವಿದ್ದು, ಪ್ರತಿ ತಾಲೂಕಿಗೆ ಒಂದರಂತೆ ಕೋವಿಡ್ ಕೇರ್ ಸೆಂಟರ್(ಸಿಸಿಸಿ) ಸ್ಥಾಪಿಸಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್‌ನಲ್ಲಿ ಪಾಸಿಟಿವ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು.
- ಡಾ.ಕೆ.ರಾಜೇಂದ್ರ ಜಿಲ್ಲಾಧಿಕಾರಿ

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net