ಬಾಗಲಕೋಟೆ ಜಿಲ್ಲೆಯಲ್ಲೂ ಚಿರತೆ ಕಾಟ..! - ತುಮ್ಮರಮಟ್ಟಿ-ಅನಗವಾಡಿ ವ್ಯಾಪ್ತಿಯಲ್ಲಿ ಗುರುತು ಪತ್ತೆ

Bilagi
ಚಿರತೆ ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಹರಡಿದಿದ್ದರಿಂದ ಜನರಲ್ಲಿ ಸ್ಥೈರ್ಯ ತುಂಬಲು ಬೀಳಗಿ ವಲಯ ಅರಣ್ಯಾಧಿಕಾರಿಗಳು ತುಮ್ಮರಮಟ್ಟಿ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಸಿರುವುದು.
Published on

ಬಾಗಲಕೋಟೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸದ್ದು ಮಾಡುತ್ತಿರುವ ಚಿರತೆ ಕಾಟ ಇದೀಗ ಬಾಗಲಕೋಟೆ ಜಿಲ್ಲೆಗೂ ವ್ಯಾಪಿಸಿದೆ. ಬೀಳಗಿ ತಾಲೂಕಿನ ತುಮ್ಮರಮಟ್ಟಿ- ಅನಗವಾಡಿ ವ್ಯಾಪ್ತಿಯ ರೈತರ ಜಮೀನಿಗಳಲ್ಲಿ ಚಿರತೆ ಓಡಾಡುತ್ತಿದೆ ಎನ್ನಲಾಗಿದೆ.

ನಾಲ್ಕು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಆ ಭಾಗದ ಅನೇಕರು ಹೇಳುತ್ತಿದ್ದಾರೆ. ಕೆಲವರು ಕಣ್ಣಾರೆ ಕಂಡಿದ್ದಾಗಿಯೂ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ.

ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ವಿವಿಧೆಡೆ ಪರಿಶೀಲನೆ ನಡೆಸಿದ್ದಾರೆ. ಕೆಲವು ಕಡೆಗೆ ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು ದೃಢಪಡಿಸಿದ್ದಾರೆ. ಇದರ ಜೊತೆಗೆ ತುಮ್ಮರಮಟ್ಟಿ ಗ್ರಾಮದಲ್ಲಿ ಆಕಳು ಕರುವನ್ನು ಬೇಟೆಯಾಡಿ ತಿಂದಿದೆ ಎನ್ನಲಾಗುತ್ತಿದ್ದು, ಇದರಿಂದ ಚಿರತೆ ಬಂದಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ.

ಚಿರತೆ ತುಮ್ಮರಮಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಇರಬಹುದು. ಕಬ್ಬು ಬೆಳೆ ಸಾಕಷ್ಟು ಇದ್ದು, ಅಲ್ಲಿ ಓಡಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಚಿರತೆ ಬಂದಿದೆ ಎನ್ನುವ ಸುದ್ದಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಈ ನಿಟ್ಟಿನಲ್ಲಿ ಬೀಳಗಿ ವಲಯ ಅರಣ್ಯಾಧಿಕಾರಿ ಎಚ್.ಬಿ. ಡೋಣಿ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲೆ ಬೀಡು ಬಿಟ್ಟಿದ್ದಾರೆ. ಸಾರ್ವಜನಿಕ ಸಭೆ ನಡೆಸಿ, ಜನರು ಆತಂಕಕ್ಕೆ ಒಳಗಾಗಬಾರದು, ಎಚ್ಚರದಿಂದ ಇರುವಂತೆ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.

ಚಿರತೆ ದೊಡ್ಡ ದೊಡ್ಡ ಪ್ರಾಣಿಗಳ ಮೇಲೆ ದಾಳಿ ಮಾಡಲ್ಲ. 20 ರಿಂದ 50 ಕೆಜಿ ತೂಕ ಇರುವ ಪ್ರಾಣಿಗಳ ಮೇಲೆ ಬೇಟೆ ಆಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಜನರು ಅಧೈರ್ಯಗೊಳ್ಳದೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಚಿರತೆ ಪತ್ತೆಗಾಗಿ ಶೋಧ ಕಾರ್ಯವನ್ನು ನಡೆಸಿದ್ದಾರೆ. ಸದ್ಯ 8 ಕ್ಯಾಮರಾ ಟ್ರ್ಯಾಪ್‌ಗಳನ್ನು ಅಳವಡಿಸಿದ್ದು, ಒಂದು ಕುರಿ ಕಟ್ಟಿ ಬೋನು ಇಟ್ಟಿದ್ದಾರೆ.

ಬೀಳಗಿ ತಾಲೂಕಿನ ತುಮ್ಮರಮಟ್ಟಿ-ಅನಗವಾಡಿ ಗ್ರಾಮ ವ್ಯಾಪ್ತಿಯಲ್ಲಿ ಚಿರತೆ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೆಲವರು ನೋಡಿದ್ದಾಗಿಯೂ ಹೇಳುತ್ತಿದ್ದಾರೆ. ಸದ್ಯ ಕೆಲವು ಕಡೆಗೆ ಚಿರತೆ ಹೆಜ್ಜೆಗಳು ಕಾಣಿಸಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚಿರತೆ ಪತ್ತೆಗಾಗಿ ಶೋಧಕಾರ್ಯವೂ ನಡೆದಿದೆ. ಕ್ಯಾಮರಾ ಟ್ರ್ಯಾಪ್ ಅಳವಡಿಸಲಾಗಿದೆ. ಬೋನ್ ಸಹ ಇಟ್ಟಿದ್ದೇವೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ. ಈ ಬಗ್ಗೆ ಎಚ್ಚರಿಕೆ ಇರಲಿ.
ಎಚ್.ಬಿ. ಡೋಣಿ ವಲಯ ಅರಣ್ಯಾಧಿಕಾರಿ, ಬೀಳಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net