ಅನರ್ಹರು ಪಡಿತರ ಕಾರ್ಡ್ ಹಿಂದಿರುಗಿಸಿ

captain dr k rajendra
Published on

ಬಾಗಲಕೋಟೆ: ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಆಯಾ ತಾಲೂಕಿನ ತಹಸೀಲ್ದಾರರಿಗೆ ಒಪ್ಪಿಸಿ ಎಪಿಎಲ್ ಪಡಿತರ ಚೀಟಿ ಪಡೆಯಬೇಕು. ತಪ್ಪಿದಲ್ಲಿ ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಕ್ರಮ ಜರುಗಿಸುವುದರ ಜತೆಗೆ ಹಂಚಿಕೆ ಪಡೆದ ಆಹಾರಧಾನ್ಯಗಳ ಮಾರುಕಟ್ಟೆ ಮೌಲ್ಯವನ್ನು ವಸೂಲು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಕಾಯಂ ನೌಕರರು ಅಂದರೆ, ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು, ಸರ್ಕಾರಿ ಪ್ರಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲ ಕುಟುಂಬಗಳು ಹಾಗೂ ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷ ರೂ.ಗಿಂತಲೂ ಹೆಚ್ಚು ಇರುವ ಕುಟುಂಬಗಳು ಅಂತ್ಯೋದಯ ಅನ್ನ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಪಡೆಯಲು ಅನರ್ಹರಾಗಿರುತ್ತಾರೆ.

2011ರ ಜನಗಣತಿಯಲ್ಲಿ ಜಿಲ್ಲೆಯಲ್ಲಿ 3,61,149 ಕುಟುಂಬಗಳು ದಾಖಲಾಗಿದ್ದು, 2021 ಮಾರ್ಚ್ ಮಾಹೆವರೆಗೆ ಜಿಲ್ಲೆಯಲ್ಲಿ 46,024 ಅಂತ್ಯೋದಯ ಅನ್ನ, 3,67,167 ಆದ್ಯತಾ ಸೇರಿ ಒಟ್ಟು 4,13,191 ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ನೀಡಲಾಗಿದೆ. ಜತೆಗೆ 55,367 ಕುಟುಂಬಗಳಿಗೆ ಆದ್ಯತೇತರ (ಎಪಿಎಲ್) ಪಡಿತರ ಚೀಟಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಬಲರು ಮತ್ತು ಇತರ ಅನರ್ಹರು ಹೊಂದಿರುವ ಅಂತ್ಯೋದಯ ಅನ್ನ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಪದೇ ಪದೆ ಮನವಿ ಮಾಡಲಾಗಿದೆ. ಈ ಮನವಿಗೆ ಕೆಲವರು ಸ್ಪಂದಿಸಿ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂದಿರುಗಿಸಿ ಎಪಿಎಲ್ ಪಡಿತರ ಚೀಟಿ ಪಡೆದಿರುತ್ತಾರೆ. ಆದ್ದರಿಂದ ಉಳಿದ ಅನರ್ಹರು ತಾವು ಹೊಂದಿರುವ ಪಡಿತರ ಚೀಟಿ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net