

ಮಹಾಲಿಂಗಪುರ: ನಗರದ ಹೋಟೆಲ್, ಬೇಕರಿ ಹಾಗೂ ಬೀದಿಬದಿಯ ಆಹಾರ ಮಳಿಗೆಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಸ್ವಚ್ಛತೆಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಶುಕ್ರವಾರ ಜಂಟಿ ಪರಿಶೀಲನೆ ನಡೆಸಿ, ಸಂಬಂಧಪಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿ ನ್ಯೂನತೆ ಸರಿಪಡಿಸಿಕೊಳ್ಳಲು 10 ದಿನಗಳ ಗಡುವು ವಿಧಿಸಿದರು.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಮಹಾಲಿಂಗಪುರ ಪುರಸಭೆ ಹಾಗೂ ಬನಹಟ್ಟಿ ತಹಸೀಲ್ದಾರ್ ಕಾರ್ಯಾಲಯದ ಅಧಿಕಾರಿಗಳ ತಂಡ ನಗರದ ವಿವಿಧೆಡೆ ಪರಿಶೀಲನೆ ನಡೆಸಿತು. ಆಹಾರ ಪದಾರ್ಥಗಳ ತಯಾರಿಕೆ, ಸಂಗ್ರಹಣೆ, ಮಾರಾಟದ ವ್ಯವಸ್ಥೆ, ನೈರ್ಮಲ್ಯ ಹಾಗೂ ಸ್ವಚ್ಛತೆಯ ಬಗ್ಗೆ ಪರಿಶೀಲಿಸಿದಾಗ ಕೆಲವು ಮಳಿಗೆಗಳಲ್ಲಿ ನಿಯಮ ಪಾಲನೆಯ ಕೊರತೆ ಕಂಡುಬಂದಿತು.
ಈ ಹಿನ್ನೆಲೆಯಲ್ಲಿ ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಿದ ಅಧಿಕಾರಿಗಳು, 10 ದಿನಗಳೊಳಗೆ ಅಗತ್ಯ ಸುಧಾರಣೆ ಕೈಗೊಂಡು ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸುವಂತೆ ಸೂಚಿಸಿದರು. ಗಡುವಿನ ಬಳಿಕವೂ ನಿಯಮ ಉಲ್ಲಂಘನೆ ಮುಂದುವರಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮಗಳು-2011ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಮುಧೋಳ ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಸದಾಶಿವ ಹಡಪದ ಮಾತನಾಡಿ, ಆಹಾರ ಮಳಿಗೆಗಳ ವ್ಯಾಪಾರಿಗಳು ಗ್ರಾಹಕರ ಆರೋಗ್ಯದ ದಷ್ಟಿಯಿಂದ ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಬೇಕು. ಆಹಾರ ತಯಾರಿಸುವ ಸ್ಥಳದ ನೈರ್ಮಲ್ಯ, ಪದಾರ್ಥಗಳ ಸುರಕ್ಷಿತ ಸಂಗ್ರಹಣೆ ಹಾಗೂ ಗುಣಮಟ್ಟದ ಆಹಾರ ಪೂರೈಕೆ ಕಡ್ಡಾಯ. ಪರಿಶೀಲನೆ ವೇಳೆ ಗುರುತಿಸಲಾದ ಲೋಪಗಳನ್ನು ನಿಗದಿತ ಅವಧಿಯಲ್ಲಿ ಸರಿಪಡಿಸಬೇಕು. ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿಯೂ ಪರಿಶೀಲನೆ ಮುಂದುವರಿಸಲಾಗುವುದು ಎಂದರು.
ಪುರಸಭೆ ಆರೋಗ್ಯ ನಿರೀಕ್ಷಕ ಎಂ.ಎಂ. ಮುಗಳಕೋಡ, ಬನಹಟ್ಟಿ ತಹಸೀಲ್ದಾರ್ ಕಾರ್ಯಾಲಯದ ಆಹಾರ ನಿರೀಕ್ಷಕ ಸರ್ದಾರ ಲಮಾಣಿ, ಗ್ರಾಮ ಲೆಕ್ಕಾಧಿಕಾರಿ ಸೌರಭ ಮೇತ್ರಿ, ಕಾಂತು ಹಡಪದ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.