

ಬಾಗಲಕೋಟೆ: ನಟರಾಜ ಸಂಗೀತ ವಿದ್ಯಾಲಯ ಹಾಗೂ ಕಲಾ ಸಂಘ, ನಟರಾಜ ಸಂಗೀತ ನೃತ್ಯ ನಿಕೇತನ ಹಾಗೂ ಆರ್.ಎಚ್.ಮೋರೆ ಗುರುಗಳ ಶಿಷ್ಯವೃಂದದಿಂದ ಬಾಗಲಕೋಟೆ ರಾಷ್ಟ್ರೀಯ ಸಂಗೀತೋತ್ಸವ ಸೆ. 27ರಂದು ಆಯೋಜಿಸಲಾಗಿದೆ ಎಂದು ಖ್ಯಾತ ತಬಲಾ ವಾದಕ ಕೇಶವ ಜೋಶಿ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ.ಪಂಡಿತ ಆರ್.ಎಚ್.ಮೋರೆ ಗುರುಗಳ ಪ್ರಥಮ ವರ್ಷದ ಪುಣ್ಯಸ್ಮರಣೆಯ ನಿಮಿತ್ತ ಅಂತಾರಾಷ್ಟ್ರೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಮತ್ತು ಅನೋಖೆ ತಬಲಾ ವಾದಕ, ಪ್ರಶಸ್ತಿ ಪ್ರದಾನ ಸಮಾರಂಭ ಅಂದು ಸಂಜೆ 5 ಗಂಟೆಗೆ ನವನಗರದ ಕಲಾಭವನದಲ್ಲಿ ಜರುಗಲಿದೆ ಎಂದರು.
ಚರಂತಿಮಠದ ಪ್ರಭುಸ್ವಾಮೀಜಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ, ಶಾಸಕ ಉಮೇಶ ಮೇಟಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಯುವ ನಾಯಕರಾದ ಮಲ್ಲಿಕಾರ್ಜುನ ಚರಂತಿಮಠ, ಖ್ಯಾತ ಉದ್ಯಮಿಗಳಾದ ಲಿಂಗರಾಜ ವಾಲಿ, ಡಾ.ಲತಾ ಹೆರಂಜಲ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ದಿವಂಗತ ಪಂಡಿತ ರಾವಸಾಹೇಬ್ ಮೋರೆ ಗುರುಗಳ ಸ್ಮರಣಾರ್ಥ ಅನೋಖೆ ತಬಲಾ ವಾದಕ 2025ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಖ್ಯಾತ ಮೃದಂಗ ವಾದಕ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್ ಅನೂರು ಅನಂತ ಕೃಷ್ಣ ಶರ್ಮಾ ಹಾಗೂ 2026ನೇ ಸಾಲಿನ ಪ್ರಶಸ್ತಿ ಅಂತಾರಾಷ್ಟ್ರೀಯ ಖ್ಯಾತ ತಬಲಾ ವಾದಕ ಪಂಡಿತ ಭರತ ಕಾಮತ್ ನೀಡಲಾಗುವುದು ಎಂದರು.
ಛತ್ತಿಸಗಡದ ಆರ್ಯಾ ನಂದೇ ಅವರಿಂದ ಓಡಿಸ್ಸಿ ನೃತ್ಯ ಹಾಗೂ ನಟರಾಜ ಸಂಗೀತ ವಿದ್ಯಾಲಯ ಹಾಗೂ ನಟರಾಜ ಸಂಗೀತ ನೃತ್ಯ ನಿಕೇತನ ವಿದ್ಯಾರ್ಥಿಗಳಿಂದ ಲಯ ಲಾವಣ್ಯ ಸಂಗೀತ ನಡೆಯಲಿದೆ ಎಂದು ಹೇಳಿದರು. ನಾಡಿನ ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸುನೀಲ ಮಠ, ವಿಷ್ಣು ಜೋಶಿ, ಪ್ರವೀಣ ಮಂಕಣಿ, ನವೀನ ದೇಶಪಾಂಡೆ ಮತ್ತಿತರರು ಇದ್ದರು.