

ಜಮಖಂಡಿ: ತಾಲೂಕಿನ ಸಿದ್ದಾಪುರ ಗ್ರಾಮಸ್ಥರು ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಕೆಪಿಟಿಸಿಎಲ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಗ್ರಾಮದ ರಾಜು ಕಲ್ಲಕಂಭ ಮಾತನಾಡಿ, ನಿಯಮದಂತೆ 7 ಗಂಟೆಗಳ ಕಾಲ 3 ಫೇಸ್ ಗಳ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ಆದರೆ, ಅಧಿಕಾರಿಗಳು ಸಿಂಗಲ್ ಫೇಸ್ ವಿದ್ಯುತ್ ಪೂರೈಸುತ್ತಿದ್ದು ರೈತರ ಪಂಪ್ ಸೆಟ್‌ಗಳು ಪ್ರಾರಂಭವಾಗುತ್ತಿಲ್ಲ, ಮಳೆ ಇಲ್ಲದ ಕಾರಣ ಬೆಳೆಗಳು ಒಣಗುತ್ತಿದ್ದು ಬೆಳೆಯನ್ನು ಉಳಿಸಿಕೊಳ್ಳಲು ಗುಣ ಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿಸಲಾಗಿದೆ. ಹಲವಾರು ಟಿಸಿಗಳ ಲೋಡ್ ಹಾಕಲಾಗಿದ್ದು ಗ್ರಾಮಕ್ಕೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಲೈನ್ ಕ್ಲಿಯರ್ ಮಾಡಿ ಕೊಡುವವರೆಗೆ ಹೋರಾಟ ಮುಂದು ವರಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ತುಕಾರಾಮ ಮೇಲಿನಮನಿ ಮಾತನಾಡಿ, ಹೆಸ್ಕಾಂನವರು ಅನ್ಯಾಯ ಮಾಡುತ್ತಿದ್ದು, ಗ್ರಾಮದ ರೈತರು ಕಂಗಾಲಾಗಿದ್ದಾರೆ. ಗ್ರಾಮದ ವ್ಯಾಟ್ಸಪ್ ಗ್ರೂಪ್‌ಗಳಿಗೆ ಮ್ಯಾಸೇಜ್ ಮಾಡಿ ರೈತರು ಪಂಪ್‌ಸೆಟ್‌ಗಳನ್ನು ಪ್ರಾರಂಭಿಸಬೇಡಿ ಎಂದು ತಿಳಿಸಿದ್ದಾರೆ. ಕಷ್ಟಪಟ್ಟು ಸಾಲ ಮಾಡಿ ಬೆಳೆಸಿದ ಬೆಳೆಗಳು ಒಣಗುವ ಹಂತ ತಲುಪಿದ್ದು ರೈತರು ಕಂಗಾಲಾಗಿದ್ದಾರೆ. ರೈತರ ಸಮಸ್ಯೆ ಪರಿಹರಿಸದಿದ್ದಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಭು ನಾಗರಾಳ, ಕರೆಪ್ಪ ಭೂಮಾರ, ಗುರುಲಿಂಗಪ್ಪ ಕಡಪಟ್ಟಿ, ಶೇಖರ ಬೂದಿ, ಸುಭಾಷ ಮಠದ, ರಂಗಪ್ಪ ದಳವಾಯಿ, ಯಂಕಪ್ಪ ಬೂದಿ, ರಮೇಶ ಸಿಖರೆಪ್ಪಗೋಳ, ಹಣಮಂತ ಮೇಲಿನಮನಿ, ಸದಾಶಿವ ಬೂದಿ, ವಿಠಲಬೂದಿ, ಜೊತೆಪ್ಪ ಇತರರಿದ್ದರು.