ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ. ಬೆಳೆ ಸಾಲಕ್ಕೆ ಆಗ್ರಹ

ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಒತ್ತಾಯ ಬಾಗಲಕೋಟೆ ಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನೆ
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಎದುರು ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ಶಶಿಕಾಂತ ಗುರೂಜಿ, ಶ್ರೀಶೈಲ ಬೂಮಾರ,  ಸಿದ್ದಪ್ಪ ಬಳಗಾನೂರ, ರಾಜು ನದಾ, ಬಾಹುಬಲಿ ನ್ಯಾಮಗೌಡ, ಗೋವಿಂದಪ್ಪ, ಮಹಾದೇವ ನಾಯಕ ಇತರರಿದ್ದರು.
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಎದುರು ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ಶಶಿಕಾಂತ ಗುರೂಜಿ, ಶ್ರೀಶೈಲ ಬೂಮಾರ, ಸಿದ್ದಪ್ಪ ಬಳಗಾನೂರ, ರಾಜು ನದಾ, ಬಾಹುಬಲಿ ನ್ಯಾಮಗೌಡ, ಗೋವಿಂದಪ್ಪ, ಮಹಾದೇವ ನಾಯಕ ಇತರರಿದ್ದರು.
Published on

ಬಾಗಲಕೋಟೆ: ಸರ್ಕಾರದ ಆದೇಶದಂತೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ. ಬೆಳೆ ಸಾಲ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬಾಗಲಕೋಟೆ ಡಿಸಿಸಿ ಬ್ಯಾಂಕ್ ಮುಂದೆ ಸೋಮವಾರ ಪ್ರತಿಭಟನೆ ಮಾಡಲಾಯಿತು.

ರೈತ ಮುಖಂಡರಾದ ಯಲ್ಲಪ್ಪ ಹೆಗಡೆ, ಚನ್ನಪ್ಪ ಪೂಜಾರಿ, ಮುತ್ತಪ್ಪ ಕೋಮಾರ ಮತ್ತಿತರರು ಮಾತನಾಡಿ, ಬರಗಾಲದಲ್ಲಿ ರೈತರಿಗೆ ಹೆಚ್ಚಿನ ಸಾಲ ನೀಡಬೇಕು. ಕೃಷಿ ಚಟುವಟಿಕೆಗಳಿಗೆ ಸಹಕಾರಿ ಬ್ಯಾಂಕ್‌ಗಳ ಸಾಲದ ಮೇಲೆ ಅವಲಂಬಿತ ರಾಗಿರುವುದರಿಂದ ಕೂಡಲೇ ಸಾಲ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ 5 ಲಕ್ಷ ರೂ. ಗಳ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ಆದೇಶಿಸಿದೆ. ಆದರೆ, ಇಲ್ಲಿ ಸಾಲ ನೀಡದೇ ನಿರಾಕರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬರಗಾಲ ಇರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಸರ್ಕಾರ ಕೂಡಲೇ ಬರಬೇಕು. ಜಮಖಂಡಿಯಲ್ಲಿ ಪ್ರತಿಭಟನೆ ಮಾಡಿದಾಗ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಇಲ್ಲಿಯವರೆಗೆ ಭರವಸೆ ಈಡೇರಿಸಿಲ್ಲ ಎಂದು ದೂರಿದರು.

ಪಶು ಮತ್ತು ಕುರಿ ಸಂಗೋಪನೆ ಅವಲಂಬಿಸಿರುವ ರೈತರು ಹಾಗೂ ಕುರಿಗಾಹಿಗಳಿಗೆ ನೀಡಬೇಕಾದ ಸಾಲವನ್ನು ಕೂಡಲೇ ನೀಡಬೇಕು. ಸಾಲದ ಅರ್ಜಿಗಳನ್ನು ವಿಳಂಬ ಮಾಡದೇ ಸಾಲ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಡಿಸಿಸಿ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಭ್ರಷ್ಟಾಚಾರದ ಪ್ರಕರಣಗಳು ನಡೆದಿವೆ. ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಕಬ್ಬಿಗೆ ನ್ಯಾಯಯುತ ಬೆಲೆ ನೀಡಬೇಕು. 

ಪ್ರತಿ ಟನ್‌ಗೆ 5,500 ರೂ. ಬೆಲೆ ನಿಗದಿ ಮಾಡಬೇಕು. ಸೆ. 29ರಂದು ನ್ಯಾಯಯುತ ಬೆಲೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಲಾಯಿತು.

ಶಶಿಕಾಂತ ಗುರೂಜಿ, ಶ್ರೀಶೈಲ ಬೂಮಾರ,  ಸಿದ್ದಪ್ಪ ಬಳಗಾನೂರ, ರಾಜು ನದಾ, ಬಾಹುಬಲಿ ನ್ಯಾಮಗೌಡ, ಗೋವಿಂದಪ್ಪ, ಮಹಾದೇವ ನಾಯಕ, ಸದಾಶಿವ ಕವಟಗಿ, ದರಿಯಪ್ಪ ದಾನಗೊಂಡ ಮತ್ತಿತರರಿದ್ದರು.

ಪ್ರತಿಭಟನಾ ಸ್ಥಳದಲ್ಲಿಯೇ ರೈತರು ಮಧ್ಯಾಹ್ನ ಅಡುಗೆ ಮಾಡಿ, ಊಟ ಮಾಡಿದರು. ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ನೀಲಪ್ಪನವರ ರೈತರ ಸಮಸ್ಯೆ ಆಲಿಸಿದರು. ಕುರಿ ಮತ್ತು ಪಶು ಸಂಗೋಪನೆಗೆ ಸಾಲ ನೀಡುವ ಕುರಿತು ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು. ಆದೇಶ ನೀಡುವವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net