

ಬಾದಾಮಿ: ವ್ಯಾಪಾರದಿಂದ ನಾವು ಬಣಜಿಗರು, ರಾಜಕೀಯವಾಗಿ ಹಲವರು ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸಮ ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜವನ್ನು ಕಟ್ಟಬೇಕು. ಆಧುನಿಕ ಯುಗದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜತೆಗೆ ಸಂಸ್ಕಾರವನ್ನು ಕಲಿಸಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ನಗರದ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಬಸವ ಭವನದಲ್ಲಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಬಣಜಿಗರು ತಕ್ಕಡಿ ಹಿಡಿದು ಬದುಕಿದರೆ ನಮ್ಮ ಧರ್ಮವನ್ನು ಪೂಜಿಸುವುದರ ಜತೆಗೆ ಅನ್ಯ ಧರ್ಮಗಳನ್ನು ಗೌರವಿಸಬೇಕು ಎಂದರು.
ವೀರಶೈವ ಲಿಂಗಾಯತದಲ್ಲಿರುವ ಒಳ ಪಂಗಡಗಳು ಕುಲ ಕಸುಬುಗಳ ಆಧರಿಸಿ ಆಚರಣೆಗಳಿವೆಯೇ ವಿನಃ ಅವೆಲ್ಲವೂ ಕಾಯಕದ ರೂಪಗಳಾಗಿವೆ. ಎಲ್ಲವನ್ನು ಒಗ್ಗೂಡಿಸಿಕೊಂಡು ಶಕ್ತಿಯನ್ನಾಗಿ ಪರಿವರ್ತಿಸಿ ವೀರಶೈವ ಲಿಂಗಾಯತ ಸಮುದಾಯದ ಪ್ರಭಾವ ಮತ್ತು ಶಕ್ತಿಯನ್ನು ನಮ್ಮ ಸಂಘಟನಾ ಬಲದಿಂದ ತೋರಿಸಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಎದುರಾಗಿದೆ ಎಂದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅವರು ಬಣಜಿಗ ಸಮಾಜದ ಮಹಿಳಾ ಘಟಕ, ಎ.ಸಿ. ಪಟ್ಟಣದ ನಿವೃತ್ತ ನೌಕರರ ಘಟಕವನ್ನು ಉದ್ಘಾಟಿಸಿ ಮಾತನಾಡಿ, ವೀರಪುಲಿಕೇಶಿ ಸಹಕಾರಿ ಬ್ಯಾಂಕ್, ವಿದ್ಯಾ ಸಂಸ್ಥೆ ಈ ಎರಡೂ ಸಂಸ್ಥೆಗಳು ಸಮಾಜದ ಜತೆಗೆ ಉಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿವೆ. ಇದನ್ನು ನಮ್ಮ ಪೂರ್ವಿಕರು ಹುಟ್ಟುಹಾಕಿದ್ದು ಸ್ಮರಿಸುವಂತದ್ದಾಗಿದೆ ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಮಾತನಾಡಿ, ನಮ್ಮ ಹಾಗೂ ಪಟ್ಟಣಶೆಟ್ಟಿ ಅವರ ಒಗ್ಗಟ್ಟು ಕೆಲವರಿಗೆ ರಾಜಕೀಯವಾಗಿ ಸಹಿಸಲಾಗುತ್ತಿಲ್ಲ. ಸಮಾಜದ ಹಿತದೃಷ್ಟಿಯಿಂದ ನಾವುಗಳು ಒಗ್ಗಟ್ಟಾಗಿ ಪ್ರತಿ ಸವಾಲುಗಳನ್ನು ಎದುರಿಸಿ, ಅದರಲ್ಲಿ ಯಶಸ್ವಿಯಾಗಿ ಸಮಾಜದ ಸಂಘಟನೆ ಹಾಗೂ ಕ್ಷೇತ್ರಕ್ಕೆ ಕೊಡುಗೆ ನೀಡಲು ಸದಾ ಸಿದ್ಧರಿದ್ದೇವೆ ಎಂದರು.
ಡಾ. ಅವಿನಾಶ ಮಮದಾಪುರ ಮಾತನಾಡಿ, ಬಣಜಿಗ ಸಮಾಜದ ಅಸ್ತಿತ್ವದ ಬಗ್ಗೆ ಕೆಲವರಲ್ಲಿ ಸಂಶಯವಿದ್ದು, ಅದನ್ನು ನಿವಾರಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ನಾವು ಜೈನ ಸಮುದಾಯದವರಲ್ಲ. ಆದರೆ ಜೈನ ಸಮುದಾಯ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗ ಅವರ ನೆರವು ಪಡೆದವರು. ಇದಕ್ಕೆ ಪ್ರತಿಯಾಗಿ ನಾವು ಕೂಡ ಜೈನ ಸಮುದಾಯದ ಬಸದಿಗಳ ನಿರ್ಮಾಣದಲ್ಲಿ ಅಪಾರ ಪ್ರಮಾಣದ ಕೊಡುಗೆಯನ್ನು ನೀಡಿರುವ ಬಗ್ಗೆ ಇತಿಹಾಸ ಮತ್ತು ಶಿಲಾ ಶಾಸನಗಳಲ್ಲಿ ಉಲ್ಲೇಖವಿದೆ ಎಂದರು.
ಸಮಾಜದ ಜಿಲ್ಲಾಧ್ಯಕ್ಷ ಹೊಳಬಸಪ್ಪ ಬಾಳಶೆಟ್ಟಿ ಮಾತನಾಡಿದರು. ಶಿರೋಳದ ಶಂಕರಾರೂಢ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರನ್ನು ಸನ್ಮಾನಿಸಲಾಯಿತು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಅಂಗಡಿ, ಬಿ.ಎಂ. ಟೆಂಗಿನಕಾಯಿ, ಚನಮಲ್ಲಪ್ಪ ಘಟ್ಟದ ಇತರರಿದ್ದರು. ಬಿ.ಸಿ. ಪ್ಯಾಟಿ ನಿರೂಪಿಸಿ, ವಂದಿಸಿದರು.