

ಮಾಣಿಕ್ಯ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ
ಅಮೀನಗಡ : ಶಿಕ್ಷಕ ವತ್ತಿಯ ಮೂಲಕ ದಶಕಗಳ ಕಾಲ ಶೈಕ್ಷಣಿಕ ಹಾಗೂ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿದ ನಿವತ್ತ ಉಪಪ್ರಾಚಾರ್ಯ ಆರ್.ಜಿ. ಸನ್ನಿ ಅವರ ಬದುಕು ಮತ್ತು ಸೇವೆ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿದಾಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಪ್ರಭುಶಂಕರೇಶ್ವರ ಅನುಭವ ಮಂಟಪದಲ್ಲಿ ಸಂಗಮೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಅಭಿನಂದನಾ ಸಮಿತಿ ಭಾನುವಾರ ಆಯೋಜಿಸಿದ್ದ ಆರ್.ಜಿ. ಸನ್ನಿ ಅವರ ಜನ್ಮ ಷಷ್ಟೃಬ್ದಿ ಆಚರಣೆ ಮತ್ತು ಮಾಣಿಕ್ಯ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಅಕ್ಷರ ಜ್ಞಾನ ನೀಡುವುದಷ್ಟೇ ಅಲ್ಲದೆ, ಅವರಲ್ಲಿ ನೈತಿಕ ಮೌಲ್ಯ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಆರ್.ಜಿ. ಸನ್ನಿ ಅವರ ಶೈಕ್ಷಣಿಕ ಸೇವೆ ಮಾದರಿಯಾಗಿದೆ. ಅವರ ಸಾಧನೆ ಹಾಗೂ ವ್ಯಕ್ತಿತ್ವವನ್ನು ದಾಖಲಿಸುವ ಅಭಿನಂದನಾ ಗ್ರಂಥ ಅರ್ಥಪೂರ್ಣ ಪ್ರಯತ್ನವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ಶಿಕ್ಷಕರಿಗೆ ಸಮಾಜ ನೀಡುವ ಗೌರವ ಆ ಸಮಾಜದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಸನ್ನಿ ಅವರಿಂದ ಶಿಕ್ಷಣ ಪಡೆದ ಹಳೆಯ ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಒಗ್ಗೂಡಿ ಅಭಿನಂದನಾ ಗ್ರಂಥ ಸಮರ್ಪಿಸಿರುವುದು ಅವರ ಸೇವೆಗೆ ಸಲ್ಲಿಸಿದ ಗೌರವವಾಗಿದೆ ಎಂದರು.
ಶಾಸಕ ಜೆ.ಟಿ. ಪಾಟೀಲ, ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಕರ್ನಾಟಕ ಬಾಲವಿಕಾಸ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಯುವ ಮುಖಂಡ ರಾಹುಲ್ ಜಾರಕಿಹೊಳಿ, ಐಎಎಸ್ ಅಧಿಕಾರಿ ಶಶಿಧರ ಕುರೇರ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿ, ಆರ್.ಜಿ. ಸನ್ನಿ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಕೊಡುಗೆಯನ್ನು ಸ್ಮರಿಸಿದರು.
ಆರ್.ಜಿ. ಸನ್ನಿ ದಂಪತಿಯನ್ನು ಗಣ್ಯರು ಹಾಗೂ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು. ಶಾಸಕ ಜೆ.ಟಿ. ಪಾಟೀಲ, ಮಾಜಿ ಸಚಿವ ಎಸ್.ಆರ್. ಪಾಟೀಲ ಸೇರಿ ಗಣ್ಯರು ಮತ್ತು ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಮಾಣಿಕ್ಯ ಅಭಿನಂದನಾ ಗ್ರಂಥ ಬಿಡುಗಡೆಗೊಂಡಿತು.
ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು, ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಶ್ರೀಗಳು, ಮಹರ್ಷಿ ವಾಲ್ಮೀಕಿ ಗುರುಪೀಠದ ಡಾ. ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು, ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಶ್ರೀಗಳು, ಮೂರುಸಾವಿರ ವಿರಕ್ತಮಠದ ಕುಮಾರವಿರೂಪಾಕ್ಷ ಶ್ರೀಗಳು, ಗುಬ್ಬರಗುಡ್ಡ ಕೆಂಪಯ್ಯನಮಠದ ಡಾ. ಮಲ್ಲಿಕಾರ್ಜುನ ಶ್ರೀಗಳು, ಸೋಮೇಶ್ವರಮಠದ ಮುರುಗೇಂದ್ರ ಶ್ರೀಗಳು, ಸುವರ್ಣಗಿರಿ ಸಂಸ್ಥಾನಮಠದ ಡಾ. ಚನ್ನಮಲ್ಲ ಶ್ರೀಗಳು, ಗುಡ್ಡದ ಬಸವರಾಜೇಂದ್ರ ವಿರಕ್ತಮಠದ ಶಿವಬಸವರಾಜೇಂದ್ರ ಶ್ರೀಗಳು, ಅಡವಿಸಿದ್ಧೇಶ್ವರ ಹಿರೇಮಠದ ಅಡವಿಸಿದ್ಧೇಶ್ವರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಶಾಸಕ ಉಮೇಶ ಎಚ್. ಮೇಟಿ, ಮಾತೋಶ್ರೀ ಗೌರಮ್ಮ ಗದಿಗೆಪ್ಪ ಸನ್ನಿ, ಎಸ್.ಜಿ. ಕನ್ನೂರ, ಎ.ಕೆ. ತಾಳಿಕೋಟಿ, ಶಾಂತಕುಮಾರ ಸುರಪುರ, ದ್ಯಾಮಣ್ಣ ಜಿ. ಗಾಳಿ, ಡಾ. ಆರ್.ಎಚ್. ಸನ್ನಿ ಹಾಗೂ ಗ್ರಂಥದ ಸಂಪಾದಕ ಎಚ್.ಟಿ. ರಂಗಾಪೂರ ಉಪಸ್ಥಿತರಿದ್ದರು.