ವೀರಶೈವ ಧರ್ಮ-ಸಂಸ್ಕೃತಿ ಉಳಿವಿಗೆ ಒಗ್ಗಟ್ಟಿನ ಪ್ರಯತ್ನ

ತೇರದಾಳ ಶಾಸಕ ಸಿದ್ದು ಸವದಿ ಅಭಿಮತ ಶಿವಾನಂದ ಜಗದ್ಗುರುಗಳ ‘ಜೀವನ ದರ್ಶನ’ ಕೃತಿ ಬಿಡುಗಡೆ
ಜಮಖಂಡಿ ನಗರದ ಮಾನವ ಧರ್ಮ ಮಂಟಪದಲ್ಲಿ ಸೋಮವಾರ ಸಂಜೆ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ‘ಜೀವನ ದರ್ಶನ’ ಕೃತಿ ಶಾಸಕ ಸಿದ್ದು ಸವದಿ ಬಿಡುಗಡೆಗೊಳಿಸಿದರು. ರಂಭಾಪುರಿ ಪೀಠದ ಜಗದ್ಗುರು ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು, ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಸಕ ಜಗದೀಶ ಗುಟಗುಂಟಿ ಇತರರಿದ್ದರು.
ಜಮಖಂಡಿ ನಗರದ ಮಾನವ ಧರ್ಮ ಮಂಟಪದಲ್ಲಿ ಸೋಮವಾರ ಸಂಜೆ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ‘ಜೀವನ ದರ್ಶನ’ ಕೃತಿ ಶಾಸಕ ಸಿದ್ದು ಸವದಿ ಬಿಡುಗಡೆಗೊಳಿಸಿದರು. ರಂಭಾಪುರಿ ಪೀಠದ ಜಗದ್ಗುರು ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು, ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಸಕ ಜಗದೀಶ ಗುಟಗುಂಟಿ ಇತರರಿದ್ದರು.
Published on: 

ಜಮಖಂಡಿ: ಸಾವಿರಾರು ವಷರ್ಗಳ ಇತಿಹಾಸ ಮತ್ತು ಪರಂಪರೆ ಹೊಂದಿರುವ ವೀರಶೈವ ಧರ್ಮದ ಪಂಚಪೀಠಗಳು ಅನೇಕ ಸವಾಲುಗಳ ನಡುವೆಯೂ ತಮ್ಮ ಧಾರ್ಮಿಕ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿವೆ. ಇಂತಹ ಪುರಾತನ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ನಗರದ ಸಮೀಪದ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿರುವ ಮಾನವ ಧರ್ಮ ಮಂಟಪದಲ್ಲಿ ಸೋಮವಾರ ಸಂಜೆ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ‘ಜೀವನ ದರ್ಶನ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವೀರಶೈವ ಧರ್ಮದ ಪಂಚಪೀಠಗಳು ಪುರಾತನ ಇತಿಹಾಸ ಮತ್ತು ವಿಶಿಷ್ಟ ಧಾರ್ಮಿಕ ಪರಂಪರೆ ಹೊಂದಿವೆ. ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗಗಳ ಮೂಲಕ ಈ ಪೀಠಗಳ ಪರಂಪರೆ ಬೆಳೆದು ಬಂದಿದೆ ಎಂಬ ನಂಬಿಕೆಯಿದೆ. ಶಿವನಿಂದ ಸ್ಥಾಪಿತವಾದ ಈ ಪೀಠಗಳು ಧರ್ಮದ ನೆಲೆಗಟ್ಟಿನಲ್ಲಿ ಸಮಾಜವನ್ನು ಮುನ್ನಡೆಸುವ ಮಹತ್ವದ ಕಾರ್ಯ ಮಾಡುತ್ತಿವೆ. ಅನೇಕ ಶತಮಾನಗಳ ಪರಕೀಯರ ಆಳ್ವಿಕೆ ನಡುವೆಯೂ ಪಂಚಪೀಠಗಳು ತಮ್ಮ ಅಸ್ತಿತ್ವ ಮತ್ತು ಧಾರ್ಮಿಕ ಪರಂಪರೆ ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ವೀರಶೈವ ಧರ್ಮದ ವಿಶೇಷತೆಯೆಂದರೆ ಶಿವನ ಮೇಲೆ ಭಕ್ತಿ ಹೊಂದಿರುವ ಎಲ್ಲರಿಗೂ ಧಾರ್ಮಿಕ ದೀಕ್ಷೆ ಪಡೆಯುವ ಅವಕಾಶವಿದೆ. ಜಾತಿ, ಉಪಜಾತಿ ಅಥವಾ ಧರ್ಮದ ಆಧಾರದಲ್ಲಿ ಸೀಮಿತಗೊಳ್ಳದೆ ಎಲ್ಲರನ್ನೂ ಒಳಗೊಳ್ಳುವ ವಿಶಾಲ ಮನೋಭಾವ ಈ ಪರಂಪರೆಯಲ್ಲಿದೆ. ಇಂತಹ ಧಾರ್ಮಿಕ ಮೌಲ್ಯ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು.

ಅಧಿಕಾರ ಶಾಶ್ವತವಲ್ಲ. ಆದರೆ ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಶಾಶ್ವತ ಮೌಲ್ಯ ಹೊಂದಿವೆ. ಅಧಿಕಾರದಲ್ಲಿರುವವರು ಧರ್ಮ ಗುರುಗಳಿಗೆ ಗೌರವ ನೀಡಿ, ಧಾರ್ಮಿಕ ಮೌಲ್ಯಗಳಿಗೆ ಆದ್ಯತೆ ನೀಡಬೇಕು. ರಾಜಕೀಯ ಅಧಿಕಾರದ ಪ್ರಭಾವಕ್ಕೆ ಒಳಗಾಗಿ ಧಾರ್ಮಿಕ ಪರಂಪರೆ ನಿರ್ಲಕ್ಷಿಸುವ ಮನೋಭಾವ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಧರ್ಮ ಮತ್ತು ಧರ್ಮ ಗುರುಗಳ ಬಗ್ಗೆ ಹಗುರವಾಗಿ ಮಾತನಾಡುವವರ ವಿರುದ್ಧ ಸಮಾಜ ಜಾಗೃತವಾಗಬೇಕು. ಯಾವುದೇ ರಾಜಕೀಯ ಪಕ್ಷ ಅಥವಾ ಜಾತಿಯ ಹಂಗಿಲ್ಲದೆ ಧರ್ಮದ ಹಿತ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಧಾರ್ಮಿಕ ಪರಂಪರೆ ಉಳಿಸುವ ವಿಚಾರದಲ್ಲಿ ಮಠಾಧೀಶರು ಮತ್ತು ಸಮಾಜದ ಮುಖಂಡರು ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಮತ ಧರ್ಮಗಳು ಬೆಳೆದುಕೊಂಡು ಬಂದಿವೆ. ಇವುಗಳಲ್ಲಿ ಒಂದಾಗಿರುವ ವೀರಶೈವ ಧರ್ಮವು ಒಂದು. ಅದರ ಇತಿಹಾಸ ಮತ್ತು ಬೆಳೆದುಕೊಂಡು ಬಂದ ಪರಂಪರೆ ಅತ್ಯಂತ ಪ್ರಾಚೀನವಾದುದು. ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟ ಧರ್ಮ ವೀರಶೈವ ಧರ್ಮ ಎಂದು ತಿಳಿಸಿದರು.

ಪ್ರಾಚೀನ ಇತಿಹಾಸ ಹೊಂದಿದ ವೀರಶೈವ ಧರ್ಮ ಪರಶಿವನ ಪಂಚಮುಖಗಳಿಂದ ಆವಿರ್ಭವಿಸಿದ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಭೂಮಂಡಲದಲ್ಲಿ ಸ್ಥಾಪಿಸಿದರು. ವೀರಶೈವ ಧರ್ಮದ ಪ್ರಾಚೀನ ಇತಿಹಾಸ ಶಿವಾಗಮಗಳಲ್ಲಿ ಕಾಣಬಹುದು. ಜೀವ ಶಿವನಾಗುವ ಅಂಗ ಲಿಂಗವಾಗುವ ದೇಹ ದೇವಾಲಯವಾಗಿಸುವ ಭವಿ ಭಕ್ತನಾಗಿಸುವ ಜಾತಿ ಜ್ಯೋತಿಯಾಗಿಸುವ ಪದಾರ್ಥ ಪ್ರಸಾದವಾಗಿಸುವ ವಿಚಾರಗಳನ್ನು ಬೋಧಿಸುತ್ತದೆ. ಕರ್ಮ ಧರ್ಮವನ್ನಾಗಿಸುವ ಕಾಯಕ ಕೈಲಾಸವಾಗಿಸುವ ನೆಲ ಜಲಗಳನ್ನು ತೀರ್ಥ ಕ್ಷೇತ್ರಗಳನ್ನಾಗಿಸುವ ವಿಶೇಷತೆಯನ್ನು ಹೊಂದಿದೆ ಎಂದು ಹೇಳಿದರು.

ಅರ್ಚನೆಗಿಂತ ಅರ್ಪಣೆ, ವ್ಯಕ್ತಿ ನಿಷ್ಠೆಗಿಂತ ತತ್ವ ನಿಷ್ಠೆಗೆ ಚರಿತ್ರೆಗಿಂತ ಚಾರಿತ್ರ್ಯ, ಸ್ಥಾವರಕ್ಕಿಂತ ಜಂಗಮಕ್ಕೆ, ದಾನಕ್ಕಿಂತ ದಾಸೋಹಕ್ಕೆ ವಿಶೇಷತೆ ಕಲ್ಪಿಸಿ ಕೊಟ್ಟ ಕೀರ್ತಿ ವೀರಶೈವ ಧರ್ಮಕ್ಕಿದೆ. ಜಗದ್ಗುರು ರೇಣುಕಾಚಾರ್ಯರು ಆಸ್ತಿಗಿಂತ ಆಸಕ್ತಿ ಅವಿಶ್ವಾಸಕ್ಕಿಂತ ಆತ್ಮ ವಿಶ್ವಾಸಕ್ಕೆ ಆತ್ಮೋದ್ದಾರಕ್ಕಿಂತ ಲೋಕೋದ್ದಾರಕ್ಕೆ ಮಹತ್ವ ಕೊಟ್ಟಿದ್ದನ್ನು ಕಾಣಬಹುದು. ಜ್ಞಾನ ಕ್ರಿಯಾತ್ಮಕವಾದ ವೀರಶೈವ ಧರ್ಮ ಸಂಸ್ಕೃತಿ ಮತ್ತು ಮಾನವ ಧರ್ಮದ ಆದರ್ಶ ಮೌಲ್ಯ ಬೋಧಿಸುವುದೇ ದಸರಾ ಸಮಾರಂಭದ ಆಶಯ ಎಂದು ಅಭಿಪ್ರಾಯ ಪಟ್ಟರು.

ಅಮ್ಮಿನಭಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವೀರಶೈವ ಧರ್ಮದ ಪ್ರಾಚೀನತೆ ಮತ್ತು ಪಂಚ ಪೀಠಗಳ ಪರಂಪರೆ ಕುರಿತು ವಿವರಿಸಿದರು.

ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಗದೀಶ ಗುಡಗುಂಟಿ, ರವೀಂದ್ರ ಗವಳಿ, ಉಮೇಶ ಜಾಧವ, ಅಶೋಕ ಗಾಂವಿ, ರಾಜೇಶ್ವರಿ ಹಿರೇಮಠ, ಮಹದೇವ ಇಟ್ಟಿ ಇತರರಿದ್ದರು. ಸಾಹಿತಿ ಶಾರದಾ ಮುಳ್ಳೂರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net