

ಹೋರಾಟಕ್ಕೆ ಜಾತಿ-ಪಕ್ಷದ ಬಣ್ಣ ಬಳಿಯಬೇಡಿ ಹಕ್ಕಿಗಾಗಿ ಧ್ವನಿ ಎತ್ತುವುದು ಅನಿವಾರ್ಯ
ಚಿಮ್ಮಡ : ರೈತರ ಹೋರಾಟಕ್ಕೆ ಯಾವುದೇ ಜಾತಿ, ಧರ್ಮ ಅಥವಾ ಪಕ್ಷದ ಬಣ್ಣವಿಲ್ಲ. ಎಲ್ಲ ಪಕ್ಷಗಳಿಗೆ ಸೇರಿದವರು ಹಾಗೂ ಸರ್ವ ಧರ್ಮದ ರೈತರು ತಮ್ಮ ಹಕ್ಕಿಗಾಗಿ ಹೋರಾಟದಲ್ಲಿ ಭಾಗವಹಿಸಿದ್ದಾರೆ. ರೈತರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಸರ್ಕಾರ ಮತ್ತು ಜನಪ್ರತಿನಿಧಿಗಳು ನಡೆದುಕೊಳ್ಳಬೇಕು ಎಂದು ರೈತ ಮುಖಂಡ ಶಶಿಕಾಂತ ಗುರೂಜಿ ಹೇಳಿದರು.
ಗ್ರಾಮದ ಬಸವ ಪೆಟ್ರೋಲಿಯಂ ಆವರಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಿದರೆ ಕಾಂಗ್ರೆಸ್ ಪ್ರೇರಿತ ಹೋರಾಟವೆಂದೂ, ಡಿ.ಕೆ. ಶಿವಕುಮಾರ ವಿರುದ್ಧ ಪ್ರತಿಭಟಿಸಿದರೆ ಬಿಜೆಪಿ ಪ್ರೇರಿತ ಹೋರಾಟವೆಂದೂ ಬಿಂಬಿಸಲಾಗುತ್ತಿದೆ. ಹಾಗಾದರೆ ರೈತರು ಯಾರ ವಿರುದ್ಧ ಹೋರಾಟ ಮಾಡಬೇಕು? ಕಬ್ಬಿಗೆ ಕೇಂದ್ರ ಸರ್ಕಾರ ಎಂಎಸ್ಪಿ ಹಾಗೂ ರಾಜ್ಯ ಸರ್ಕಾರ ಎಸ್ಎಪಿ ದರ ನಿಗದಿಪಡಿಸುವ ಜವಾಬ್ದಾರಿ ಹೊಂದಿವೆ. ಹೀಗಾಗಿ ಎರಡೂ ಸರ್ಕಾರಗಳ ವಿರುದ್ಧ ರೈತರ ಹಕ್ಕಿಗಾಗಿ ಧ್ವನಿ ಎತ್ತುವುದು ಅನಿವಾರ್ಯ. ರೈತರ ಹೋರಾಟವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಚುನ್ನಪ್ಪ ಪೂಜಾರಿ ಮತ್ತು ಶಶಿಕಾಂತ ಗುರೂಜಿ ನೇತತ್ವದಲ್ಲಿ ನಡೆದ ರೈತರ ಸಂಘಟಿತ ಹೋರಾಟದ ಲವಾಗಿ ಕಾರ್ಖಾನೆ ಮಾಲೀಕರು ಕಬ್ಬಿಗೆ ಹೆಚ್ಚಿನ ದರ ನೀಡಲು ಮುಂದಾಗಿದ್ದಾರೆ. ಇದು ರೈತರ ಒಗ್ಗಟ್ಟಿನ ಹೋರಾಟಕ್ಕೆ ಸಂದ ಜಯವೇ ಹೊರತು ಕಾರ್ಖಾನೆ ಮಾಲೀಕರ ಸ್ವಯಂಪ್ರೇರಿತ ನಿರ್ಧಾರವಲ್ಲ ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ರೈತರ ಹಿತಕ್ಕಾಗಿ ಚುನ್ನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ನಡೆಸಿದ ಹೋರಾಟದ ಬಗ್ಗೆ ಎರಡು ಮಾತಿಲ್ಲ. ಆದರೆ ಪ್ರತಿ ಟನ್ ಕಬ್ಬಿಗೆ 3,600 ರೂ. ದರಕ್ಕೆ ಒಪ್ಪಿಕೊಂಡಿರುವ ಬಗ್ಗೆ ಅಸಮಾಧಾನವಿದೆ. ಬರಗಾಲದ ಪರಿಸ್ಥಿತಿಯಲ್ಲಿ ರೈತರಿಗೆ ವೈಜ್ಞಾನಿಕ ಬೆಲೆ ದೊರೆಯಬೇಕು. ಕಾರ್ಖಾನೆಗಳ ನಡುವೆ ಸ್ಪರ್ಧೆ ಇದ್ದು, ಹೋರಾಟವಿಲ್ಲದಿದ್ದರೂ 4,500 ರೂ. ದರ ನೀಡುತ್ತಿದ್ದೆವು ಎಂದು ಕಾರ್ಖಾನೆ ಮಾಲೀಕರೊಬ್ಬರು ಹೇಳಿರುವುದಾಗಿ ತಿಳಿಸಿದ ಅವರು, ಪಕ್ಷದಿಂದ ಹೊರಹಾಕಿದರೂ ರೈತರ ಹೋರಾಟಕ್ಕೆ ತಮ್ಮ ಬೆಂಬಲ ಮುಂದುವರಿಯಲಿದೆ ಎಂದರು.
ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಶಿಕಾಂತ ಗುರೂಜಿ, ಕಾರ್ಖಾನೆ ಮಾಲೀಕರೊಂದಿಗೆ ನೇರವಾಗಿ ಹೋರಾಟಕ್ಕಿಳಿದಾಗ ಮಾತ್ರ ರೈತರ ಸಮಸ್ಯೆಗಳ ತೀವ್ರತೆ ಅರಿವಾಗುತ್ತದೆ. ಕಬ್ಬಿನ ದರ ಹೆಚ್ಚಿಸುವ ವಿಚಾರದಲ್ಲಿ ಕಾರ್ಖಾನೆ ಮಾಲೀಕರು ಅಲ್ಪ ಮೊತ್ತ ಹೆಚ್ಚಿಸಲೂ ಚೌಕಾಶಿ ಮಾಡುತ್ತಾರೆ ಹಾಗೂ ಕಾರ್ಖಾನೆ ಮುಚ್ಚುವ ಬೆದರಿಕೆ ಹಾಕುತ್ತಾರೆ. ಹೊರಗಿನಿಂದ ಮಾತನಾಡುವುದು ಸುಲಭ, ಹೋರಾಟದ ಮುಂಚೂಣಿಯಲ್ಲಿ ನಿಂತು ರೈತರ ಪರ ಧ್ವನಿ ಎತ್ತುವುದು ಬೇರೆಯೇ ವಿಚಾರ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಮುಖಂಡ ರಾಜು ಬಗನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಚನ್ನಪ್ಪ ತೇಲಿ, ವಿದ್ಯಾಧರ ಸವದಿ, ಅಣ್ಣಪ್ಪಗೌಡ ಪಾಟೀಲ, ಬಸಪ್ಪ ಮುಗಳಖೋಡ, ಗುರಲಿಂಗಪ್ಪ ಪೂಜಾರಿ, ಶಂಕರ ಬಟಕುರ್ಕಿ, ಪರಪ್ಪ ಪಾಲಭಾವಿ, ಬೀರಪ್ಪ ಹಳೆಮನಿ, ಪ್ರಭು ಮುಧೋಳ, ಇಲಾಹಿ ಜಮಖಂಡಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.