ರಾಜಕೀಯದಲ್ಲಿ ಜೀ ಹುಜೂರ್‌ಗಳಿಗೆ ಆದ್ಯತೆ

ಕರ್ಕಳ್ಳಿ ವೇದವ್ಯಾಸ ಬ್ರಹ್ಮರ್ಷಿ ಪೀಠದ ರಾಜಗುರು ಸ್ವಾಮೀಜಿ ಬೇಸರ ರಾಷ್ಟ್ರೀಯ ಅಹಿಂದ ಪರಿಷತ್ ಅಸ್ತಿತ್ವಕ್ಕೆ ಚಿಂತನೆ
ಬಾಗಲಕೋಟೆಯಲ್ಲಿ ಭಾನುವಾರ ಕರ್ಕಳ್ಳಿ ವೇದವ್ಯಾಸ ಬ್ರಹ್ಮರ್ಷಿ ಪೀಠದ ರಾಜಗುರು ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಶಿಷ್ಠ ಮುನಿಗಳು, ಸಂಗನಬಸವ ಶ್ರೀಗಳು, ವೀರಣ ಹಳೆಗೌಡರ ಇತರರಿದ್ದರು.
ಬಾಗಲಕೋಟೆಯಲ್ಲಿ ಭಾನುವಾರ ಕರ್ಕಳ್ಳಿ ವೇದವ್ಯಾಸ ಬ್ರಹ್ಮರ್ಷಿ ಪೀಠದ ರಾಜಗುರು ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಶಿಷ್ಠ ಮುನಿಗಳು, ಸಂಗನಬಸವ ಶ್ರೀಗಳು, ವೀರಣ ಹಳೆಗೌಡರ ಇತರರಿದ್ದರು.
Published on: 

ಬಾಗಲಕೋಟೆ: ರಾಜಕಾರಣ ಕೆಲವೇ ಕುಟುಂಬಗಳ ಆಸ್ತಿಯಾಗುತ್ತಿದೆ. ಜೀ ಹುಜೂರ್‌ಗಳಿಗೆ ಆದ್ಯತೆ ಸಿಗುತ್ತಿತ್ತು. ಪ್ರಾಮಾಣಿಕ ಕಾರ್ಯಕರ್ತರನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತಿದೆ ಎಂದು ಕರ್ಕಳ್ಳಿ ವೇದವ್ಯಾಸ ಬ್ರಹ್ಮರ್ಷಿ ಪೀಠದ ರಾಜಗುರು ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ವರ್ಗದವರಿಗೆ ನಾಯಕತ್ವ ಒದಗಿಸುವುದು, ಅವರಿಗೆ ಆಗುವ ಅನ್ಯಾಯ ತಡೆಯುವುದಕ್ಕಾಗಿ ರಾಷ್ಟ್ರೀಯ ಅಹಿಂದ ಪರಿಷತ್ ಅಸ್ತಿತ್ವಕ್ಕೆ ಬರುತ್ತಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗದವರನ್ನು ಬಿಟ್ಟು ರಾಜಕೀಯ ಸಾಧ್ಯವಿಲ್ಲ. ಮತಕ್ಕಾಗಿ ಬಳಕೆ ಮಾಡಿಕೊಂಡು ನಂತರ ತುಳಿಯಲಾಗುತ್ತಿದೆ. ನಾಯಕತ್ವ ನೀಡದಿದ್ದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದರು.

ಬಾಗಲಕೋಟೆಯಲ್ಲಿ ಬಿಜೆಪಿಯಿಂದ ವೀರಣ್ಣ ಹಳೇಗೌಡರ ಅವರನ್ನು ಉಚ್ಚಾಟಿಸಿರುವುದು ಸರಿಯಲ್ಲ. ಹಿಂದುಳಿದ ವರ್ಗದ ನಾಯಕರಿಗೆ ರಾಜಕೀಯದಲ್ಲಿ ನ್ಯಾಯ ಸೂಕ್ತ ಸ್ಥಾನಮಾನ ದೊರಕಿಸಿಕೊಡಲು ಬಲಿಷ್ಠ ಸಂಘಟನೆ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅಹಿಂದ ಮುಖಂಡರು ಯಾವುದೇ ಪಕ್ಷದಲ್ಲಿರಲಿ ಅವರಿಗೆ ಅನ್ಯಾಯವಾದರೆ ಧ್ವನಿ ಎತ್ತುತ್ತೇವೆ. ಹೋರಾಟಕ್ಕೆ ಬಳಸಿಕೊಂಡು ನಂತರ ಕೈಬಿಡುವುದು ಸರಿಯಲ್ಲ. ಹೋರಾಟದ ಲ ಎಲ್ಲ ನಾಯಕರಿಗೂ ದೊರೆಯಬೇಕು ಎಂದು ಹೇಳಿದರು.

ಶ್ರದ್ಧಾನಂದ ಮಠದ ವಸಿಷ್ಠ ಮುನಿಗಳು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಮ್ಮ ಉತ್ತರಾಧಿಕಾರಿ ಮನೆಯವರೇ ಆಗಬೇಕು. ಬೇರೆಯವರು ಆಗಬಾರದು ಎಂಬುದು ಹೆಚ್ಚಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶ ದೊರೆಯುವಂತಾಗಬೇಕು ಎಂದರು.

ಹುಣಶ್ಯಾಳದ ಸಂಗನಬಸವ ಶ್ರೀಗಳು ಮಾತನಾಡಿ, ಧರ್ಮರಕ್ಷಣೆ, ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆ ಹಾಗೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಹಳೇಗೌಡರ ಹೋರಾಟಕ್ಕೆ ಬೆಂಬಲವಿದೆ ಎಂದರು.

ಮುಖಂಡ ವೀರಣ್ಣ ಹಳೆಗೌಡರ ಮಾತನಾಡಿ, ನಾನೂ ಈಗಲೂ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ಪ್ರಾಥಮಿಕ ಸದಸ್ಯತ್ವದಿಂದ ನನ್ನನ್ನೂ ಕಿತ್ತು ಹಾಕಲು ಸಾಧ್ಯವಿಲ್ಲ. ದೆಹಲಿಯಲ್ಲಿ ಸದಸ್ಯತ್ವ ಪಡೆದುಕೊಂಡಿದ್ದೇನೆ. ಬಡವರ ಪರ ಹೋರಾಟ ಮಾಡಿದ್ದೇ ತಪ್ಪಾ? ಶಾಸಕ ಜಗದೀಶ ಗುಡಗುಂಟಿ ಅವರಿಗೆ ಸಿಂಗಲ್ ವರ್ಡ್ ಪದ ಬಳಕೆ ಮಾಡಿದ್ದೇನೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಗುಡಗುಂಟಿ ಅವರಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧನಿದ್ದೇನೆ. ಆದರೆ, ಏಕಾಏಕಿ ಪಕ್ಷದಿಂದ ಉಚ್ಚಾಟಿಸಿದ್ದು ಸರಿಯಲ್ಲ ಎಂದು ಹೇಳಿದರು.

2028ಕ್ಕೆ ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಬೇಕು. ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ. ಬಡವರ, ಹಿಂದುಳಿದವರ ಪರ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

ನಗರದಲ್ಲಿ ಭಾನುವಾರ ರಾಷ್ಟ್ರೀಯ ಕೋಲಿ ಬೆಸ್ತ ನಿಶಾದ್ ಹಿಂದುಳಿದ ವರ್ಗಗಳ ಮಠಾಧೀಶರ ಮಹಾಸಭಾ ಸಭೆ ನಡೆಯಿತು. ಯಲ್ಲಪ್ಪ ಹೆಗಡೆ, ಸಿದ್ದಪ್ಪ ಬಿದರಿ ಉಮೇಶ ಆಲಮೇಲಕರ, ಸದಾಶಿವ ಡಾಂಗೆ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net