

ರಬಕವಿ-ಬನಹಟ್ಟಿ: ನಶಾಮುಕ್ತ ಯುವ ಸಮಾಜ ನಿರ್ಮಾಣಕ್ಕೆ ಯುವಜನರು ಸಂಕಲ್ಪ ಮಾಡಬೇಕು. ದುಶ್ಚಟಗಳಿಗೆ ಬಲಿಯಾಗದೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ, ವ್ಯಾಯಾಮ ಸೇರಿ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಿಎ ರಾಜಕುಮಾರ ಭದ್ರಣ್ಣವರ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಸರ್ಕಾರದ ನಶಾಮುಕ್ತ ಯುವ ಅಭಿಯಾನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಜನರು ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು. ಎಸ್‌ಎಸ್‌ವೈಯಂತಹ ಯೋಗಾಸನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸಿಕೊಳ್ಳಬಹುದು. ಯುವಕರಲ್ಲಿ ನಶೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲು ಶಾಲಾ-ಕಾಲೇಜುಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಅಗತ್ಯವಿದೆ ಎಂದರು.
ಡಾ.ಸವಿತಾ ಭದ್ರಣ್ಣವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವತಿಯರಲ್ಲಿಯೂ ದುಶ್ಚಟಗಳ ಪ್ರವೃತ್ತಿ ಕಂಡುಬರುತ್ತಿರುವುದು ಆತಂಕಕಾರಿ. ಪ್ರತಿಯೊಬ್ಬರೂ ಧನಾತ್ಮಕವಾಗಿ ಚಿಂತಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎಂದು ತಿಳಿಸಿದರು.
ಅಶೋಕ್ ಕನ್ನಾಳ ವಿದ್ಯಾರ್ಥಿಗಳಿಗೆ ನಶಾಮುಕ್ತಿಯ ಪ್ರಮಾಣವಚನ ಬೋಧಿಸಿದರು. ಪ್ರಾಚಾರ್ಯ ಡಾ.ಎಸ್.ಆರ್.ಹಂದಿಗುಂದ, ಎನ್‌ಎಸ್‌ಎಸ್ ಸಂಯೋಜಕ ಡಾ.ಚೇತನ್ ಬಿ. ಡಾಗಾ ಇದ್ದರು. ಡಾ.ಮಹದೇವ ಪೋತರಾಜ ನಿರೂಪಿಸಿದರು. ಡಾ.ಪುಂಡಲೀಕ ಬಾಡಗಿ ವಂದಿಸಿದರು.