

ರಬಕವಿ-ಬನಹಟ್ಟಿ: ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಮಹತ್ತರ ಮಾನವೀಯ ಸೇವೆಯಾಗಿದ್ದು, ಆರೋಗ್ಯವಂತ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಚೇರ್ಮನ್ ಮಲ್ಲಿಕಾರ್ಜುನ ತುಂಗಳ ಹೇಳಿದರು.
ಬನಹಟ್ಟಿ ನಗರದ ಅಶೋಕ ಕಾಲನಿಯ ಬಹತ್ ಮೈದಾನದಲ್ಲಿ ಶ್ರೀಶೈಲ ಅನ್ನದಾಸೋಹ ಸದ್ಭಕ್ತ ಮಂಡಳಿ ಸೇವಾ ಸಂಘದ ವತಿಯಿಂದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅಪಘಾತ, ಶಸ್ತ್ರಚಿಕಿತ್ಸೆ ಹಾಗೂ ತುರ್ತು ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ ರಕ್ತದಾನಿಗಳ ಕೊಡುಗೆ ಹಲವು ಜೀವಗಳಿಗೆ ಮರುಜೀವ ನೀಡುತ್ತದೆ. ಆದ್ದರಿಂದ ಯುವ ಜನತೆ ರಕ್ತದಾನದ ಮಹತ್ವ ಅರಿತು ನಿಯಮಿತವಾಗಿ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಧಾರ್ಮಿಕ ಆಚರಣೆಗಳೊಂದಿಗೆ ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವ ಶ್ರೀಶೈಲ ಅನ್ನದಾಸೋಹ ಸದ್ಭಕ್ತ ಮಂಡಳಿ ಸೇವಾ ಸಂಘದ ಪ್ರಯತ್ನ ಶ್ಲಾಘನೀಯ. ಜಾತ್ರೆಯ ಸಂಭ್ರಮವನ್ನು ಸಮಾಜಮುಖಿ ಕಾರ್ಯದೊಂದಿಗೆ ಬೆಸೆದಿರುವುದು ಇತರ ಸಂಘ-ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಮಾರ ಬಿಳ್ಳೂರ, ಕಿರಣ ಆಳಗಿ, ಚೆನ್ನಪ್ಪ ಗುಣಕಿ, ಶಿವು ಬಾಗೇವಾಡಿ, ಚೆನ್ನಬಸಯ್ಯ ಮಠಪತಿ, ಮಲ್ಲಿಕಾರ್ಜುನ ಗಸ್ತಿ, ರಾಜು ಲುಕ್ಕ, ಪ್ರಭಾಕರ ಚಲವಾದಿ, ದುಂಡಪ್ಪ ಸೊಲ್ಲಾಪುರ, ಇಂತಿಯಾಜ್ ಣಿಬಂಧ, ಗೋಪಾಲ ಪವಾರ, ಶ್ರೀಶೈಲ ಜೀರಗಾಳ, ಮಹೇಶ ಲುಕ್ಕ, ಸುಭಾಷ ಮಡ್ಡಿಮನಿ, ಹುಸೇನ ಯಾದವಾಡ, ಮುಸ್ತಾ ಸತ್ತಿ, ಪ್ರಭು ತಳವಾರ, ಶಂಕರ ಮುಂಡಾಸ, ಮುಧೋಳ ರಾಮನಗೌಡ, ಬ್ಲಡ್ ಬ್ಯಾಂಕ್ನ ಡಾ. ಮಹಾದೇವ ಪೂಜಾರಿ, ಗೋಪಾಲ ಕೋರೆ ಹಾಗೂ ಪ್ರದೀಪ ಕರ್ಜಗಿ ಉಪಸ್ಥಿತರಿದ್ದರು.