

ಕಮತಗಿ: ಸಂಪೂರ್ಣವಾಗಿ ಮಾತು ತ್ಯಜಿಸಿ ಮನಸ್ಸನ್ನು ಏಕಾಗ್ರಗೊಳಿಸಿ ಮಾಡುವ ಒಂದು ಕಠಿಣ ವೃತವೇ ಮೌನಾನುಷ್ಠಾನ ಎಂದು ಗದಗಿನ ಶೀರುಂಜೆ ಜ್ಞಾನ ಯೋಗಾಶ್ರಮದ ಬಸವ ಸಮರ್ಥ ಸ್ವಾಮೀಜಿ ಹೇಳಿದರು.
ಸಮೀಪದ ಸೀತಿಮನಿ ಶ್ರದ್ಧಾನಂದ ಆಶ್ರಮದಲ್ಲಿ ಶರಣ ಸಂಗಪ್ಪ ಸೀತಿಮನಿ 42 ದಿನಗಳ ಕಾಲ ಕೈಗೊಂಡಿದ್ದ ಮೌನಾನುಷ್ಠಾನ ಮುಕ್ತಾಯ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ, ಶರಣ ಸಂಗಪ್ಪ ಸೀತಿಮನಿ ಅವರಿಗೆ ಒಳಿತಾಗಲಿ, ನಾಡಿನ ಜನ ಸುಭಿಕ್ಷೆಯಿಂದ ಇರಲಿ ಎಂಬ ಸದುದ್ದೇಶದಿಂದ ಈ ಕಠಿಣ ಆಚರಣೆ ಮಾಡುವ ಮೂಲಕ ಪ್ರಪಂಚದ ಜೊತೆ ಪಾರಮಾರ್ಥ ಸಾಧಿಸಿದ್ದಾರೆ ಎಂದು ಹೇಳಿದರು.
ನಿಡಗುಂದಿ ರುದ್ರಮುನಿ ಸ್ವಾಮೀಜಿ ಮಾತನಾಡಿ, ಯಾವ ವ್ಯಕ್ತಿ ಒಳ್ಳೆಯ ಗುಣ ಹೊಂದಿರುತ್ತಾನೋ ಅವನಿಗೆ ಮಾತ್ರ ಆಧ್ಯಾತ್ಮದಲ್ಲಿ ಸಾಧನೆ ಮಾಡಲು ಸಾಧ್ಯ. ಅದಕ್ಕಾಗಿಯೇ ಶರಣ ಸಂಗಪ್ಪ ಇಂತಹ ಕಠಿಣ ತಪಸ್ಸು ಮಾಡಲು ಸಾಧ್ಯವಾಗಿದೆ ಎಂದರು.
ಪೂರ್ಣಾನಂದ ಆಶ್ರಮದ ಪೀಠಾಧಿಪತಿ ವಶಿಷ್ಠ ಮುನಿಗಳು, ಮೌನಾಚರಣೆ ತಪಸ್ಸು ಮಾಡಿದಂತೆ. ಶಿವಯೋಗ ಸಾಧನೆ ಹಾಗೂ ದೈವತ್ವ ಚಿಂತನೆ ಮಾಡುವ ಅಧ್ಯಾತ್ಮದ ಪರಿಯಾಗಿದ್ದು, ಸಂಗಪ್ಪ ಸೀತಿಮನಿ ಆಧ್ಯಾತ್ಮಿಕ ಶಕ್ತಿಯನ್ನು ವೃದ್ಧಿಸಿಕೊಂಡಿದ್ದಾರೆ ಎಂದು ಹೇಳಿದರು.
ತೇರಾಮೇಲ ಗಂಗೂರಿನ ಭರತ್ ಸ್ವಾಮೀಜಿ, ಸರೂರಿನ ಮೃತ್ಯುಂಜಯ ಸ್ವಾಮೀಜಿ ಹಾಗೂ ನಾಗೋಡದ ಮಹಾಂತಯ್ಯ ಒಡೆಯರ ಮಾತನಾಡಿದರು.
ಮೌನಾನುಷ್ಠಾನ ಮುಕ್ತಾಯಗೊಳಿಸಿದ ಸಂಗಪ್ಪ ಸೀತಿಮನಿ ಅವರಿಗೆ ಕಿರಿಶ್ಯಾಳ ಗ್ರಾಮದ ಸದ್ಭಕ್ತರು ಪುಷ್ಪವೃಷ್ಠಿಗೈದು ಸನ್ಮಾನಿಸಿದರು. ಆನೆಗುಂದಿ ಹಣಮಂತ ಶರಣರು ನಿರೂಪಿಸಿದರು. ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.