

ಬಾದಾಮಿ : ಮಧುಮೇಹವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯದ ಮೇಲಿನ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು ಎಂದು ಆರೋಗ್ಯಾಧಿಕಾರಿ ಡಾ. ಎಂ.ಬಿ. ಪಾಟೀಲ ಸಲಹೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್ಸಿಡಿ ಘಟಕ ಹಾಗೂ ಬಾದಾಮಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಎನ್ಸಿಡಿ ಕ್ಲಿನಿಕ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧುಮೇಹದ ಕುರಿತು ಜಾಗತಿ ಮೂಡಿಸುವ ಅಗತ್ಯವನ್ನು ತಿಳಿಸಿದರು.
ಸ್ತ್ರೀರೋಗ ತಜ್ಞೆ ಡಾ. ಕವಿತಾ ಶಿವನಾಯ್ಕರ ಮಾತನಾಡಿ, ಗರ್ಭಿಣಿಯರು ಹಾಗೂ ಬಾಣಂತಿಯರು ಕಡ್ಡಾಯವಾಗಿ ಮಧುಮೇಹ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಸಾಧ್ಯ ಎಂದರು.
ನೇತ್ರ ತಜ್ಞೆ ಡಾ. ಸವಿತಾ ಕಡೇಮನಿ ಮಾತನಾಡಿ, ಮಧುಮೇಹದಿಂದ ಕಣ್ಣಿನ ದಷ್ಟಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಹಿರಿಯ ನಾಗರಿಕರು ಸೇರಿ ಎಲ್ಲರೂ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಅರವಳಿಕೆ ತಜ್ಞ ಡಾ. ಮಂಜುನಾಥ ಡಾಲಿ ಅವರು ಈ ವರ್ಷದ ಮಧುಮೇಹದ ಮೇಲೆ ಆರಂಭಿಕ ಕ್ರಮ ಎಂಬ ಘೋಷವಾಕ್ಯದ ಮಹತ್ವ ವಿವರಿಸಿ, ಕಾಯಿಲೆ ನಿಯಂತ್ರಣದಲ್ಲಿ ಆರಂಭಿಕ ಪತ್ತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಪಾತ್ರವನ್ನು ತಿಳಿಸಿದರು.
ಡಾ. ವೀಣಾ ಕೋರಿ, ಡಾ. ಕೆ.ಟಿ. ಗಾಜಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪಿ.ಎಚ್. ಮಹಾಲಿಂಗಪೂರ, ಬಿ.ಎಚ್. ನರಸಾಪೂರ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಆಪ್ತ ಸಮಾಲೋಚಕಿ ಸ್ನೇಹಾ ನಾಯ್ಕರ ಸ್ವಾಗತಿಸಿದರು. ರವಿಗೌಡ ಹೊತಗಿಗೌಡ್ರ ನಿರೂಪಿಸಿದರು. ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ ಗಂಗಾಧರ ಫಿರಂಗಿ ವಂದಿಸಿದರು.