

ಮುಧೋಳ: ಚುನಾವಣೆ ಸಂದರ್ಭದಲ್ಲಿ ಹಣ ಪಡೆದು ಮತ ಹಾಕುವ ಪದ್ಧತಿ ನಿಲ್ಲದ ಹೊರತು ದೇಶದಲ್ಲಿ ಭ್ರಷ್ಟಾಚಾರ ಮತ್ತು ಅಪರಾಧಗಳನ್ನು ಬುಡಸಮೇತ ಕಿತ್ತೊಗೆಯಲು ಸಾಧ್ಯವಿಲ್ಲ. ನಮ್ಮನ್ನು ಆಳುವವರ ಭ್ರಷ್ಟಾಚಾರಕ್ಕೆ ಮತದಾರರೇ ಗೊಬ್ಬರ ಮತ್ತು ನೀರಿನಂತಾಗಿದ್ದಾರೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಎಚ್ಚರಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಆಯೋಜಿಸಿದ್ದ ಮಾಹಿತಿ ಹಕ್ಕು ದಿನಾಚರಣೆ, ಕಾನೂನು ಅರಿವು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸಂವಿಧಾನದ ಅಡಿಯಲ್ಲಿ ಕಠಿಣ ಕಾನೂನುಗಳಿದ್ದರೂ ಭ್ರಷ್ಟಾಚಾರ ಕಡಿಮೆಯಾಗದಿರಲು ಕಾರಣವೇನು ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಾಹಿತಿ ಹಕ್ಕು ಹೋರಾಟಗಳನ್ನು ಕೇವಲ ತನಿಖೆ ಅಥವಾ ತಪ್ಪು ಪತ್ತೆಗೆ ಸೀಮಿತಗೊಳಿಸದೆ, ಭ್ರಷ್ಟಾಚಾರದ ಮೂಲವನ್ನೇ ಕಿತ್ತೊಗೆಯುವ ನಿಟ್ಟಿನಲ್ಲಿ ಯುವ ಸಮುದಾಯ ಮತ್ತು ನಾಗರಿಕರು ಮುಂಚೂಣಿಗೆ ಬರಬೇಕು ಎಂದು ಸಲಹೆ ನೀಡಿದರು.
ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಮಾತನಾಡಿ, ನಮ್ಮ ಹಿರಿಯರು ಹೋರಾಟದ ಮೂಲಕ ಗಳಿಸಿಕೊಟ್ಟ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ಅಮೂಲ್ಯವಾದವು. ಅವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಪ್ರತಿಯೊಬ್ಬ ನಾಗರಿಕನ ಧರ್ಮ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಸಂವಿಧಾನದ ಹಕ್ಕುಗಳನ್ನು ಮೊಟಕುಗೊಳಿಸಿ, ವಿರೋಧ ಪಕ್ಷದ ನಾಯಕರನ್ನು ಜೈಲಿನಲ್ಲಿಟ್ಟು ತುರ್ತು ಪರಿಸ್ಥಿತಿ ಹೇರಿದ್ದ ಕರಾಳ ಇತಿಹಾಸ ಯಾರು ಮರೆಬಾರದು. ಪ್ರಸ್ತುತ ದಿನಗಳಲ್ಲಿಯೂ ಯುವಜನತೆ ಮತ್ತು ಹೋರಾಟಗಾರರ ಧ್ವನಿ ಅಡಗಿಸುವ ಪ್ರಯತ್ನಗಳು ನಡೆಯುತ್ತಿವೆ. ದೆಹಲಿಯಲ್ಲಿ ಹಕ್ಕುಗಳಿಗಾಗಿ ಹೋರಾಡುತ್ತಿರುವ ಯುವಕರ ಬಂಧನ ಹಾಗೂ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಸೇರಿ ಹಲವರನ್ನು ಗುರಿಯಾಗಿಸಿಕೊಂಡಿರುವ ಕ್ರಮಗಳು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿವೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಮತ್ತು ಕಾನೂನುಬದ್ಧ ಹೋರಾಟವೇ ಶಕ್ತಿಯುತ ಮಾರ್ಗ ಎಂದರು.
ಅಧ್ಯಕ್ಷ ಎಸ್.ಜಿ. ರಮೇಶ ಕುಣಿಗಲ್ ಮಾತನಾಡಿ, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಅಭ್ಯರ್ಥಿಗಳಲ್ಲಿ ಬಹುತೇಕರು ಸಾರ್ವಜನಿಕ ಸೇವೆಗಿಂತ ಭೂ ಕಬಳಿಕೆಯಲ್ಲಿ ಹೆಚ್ಚು ನಿರತರಾಗಿದ್ದಾರೆ ಎಂದು ಆರೋಪಿಸಿದ ಅವರು, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರಂತಹ ದಿಗ್ಗಜರಿಂದ ಉದ್ಘಾಟನೆಗೊಂಡ ಪ್ರಬಲ ಲೋಕಾಯುಕ್ತ ಸಂಸ್ಥೆ ಇಂದು ನಿಷ್ಕ್ರೀಯವಾಗಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್.ಎಚ್. ಮೀಟಲಕೋಡ, ಹೋರಾಟಗಾರ ಭೀಮಪ್ಪ ಗಡಾಡ, ಜಿಲ್ಲಾಧ್ಯಕ್ಷ ಹನುಮಂತ ಶಿಂಧೆ, ಪಾಂಡುರಂಗ ಜಾಧವ, ಬಸವರಾಜ ಮನಿಗಾರ ಇತರರಿದ್ದರು.