

ಜಮಖಂಡಿ: ಸಮಸ್ತ ಜನರ ಭೋಗ, ಮೋಕ್ಷಗಳಿಗೆ ಧರ್ಮವೇ ಮೂಲ. ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಸತ್ಯ, ಶಾಂತಿಯ ಬದುಕಿಗೆ ಆದರ್ಶ ಮೌಲ್ಯಗಳ ಪರಿಪಾಲನೆ ಮುಖ್ಯ. ಭಾವೈಕ್ಯತೆ ಮತ್ತು ಅಧ್ಯಾತ್ಮ ಜ್ಞಾನ ಭಾರತದ ಉಸಿರಾಗಿದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಮಹಾಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರ ಸಮೀಪದ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಮಾನವ ಧರ್ಮ ಮಂಟಪದಲ್ಲಿ ಶುಕ್ರವಾರ ಬಾಳೆಹೊನ್ನೂರು ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದರು.
ಮಾನವ ಪರಿಪೂರ್ಣದೆಡೆಗೆ ಸಾಗುವುದೇ ನಿಜವಾದ ಧರ್ಮ. ಸತ್ಯ ಪ್ರಾಮಾಣಿಕತೆಗಿಂತ ಹೆಚ್ಚು ಉದಾತ್ತವಾದ ಧರ್ಮ ಇನ್ನೊಂದಿಲ್ಲ. ಸತ್ಯವೇ ಒಂದು ಧರ್ಮ. ಇದು ಧರ್ಮವನ್ನು ರಕ್ಷಿಸುವ ರಕ್ಷಾ ಕವಚ. ಸತ್ಯದ ರಕ್ಷಾ ಕವಚ ಕಳಚಿದರೆ ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಒಂದು ಉಳಿಯಲಾರವು. ಮಾನವೀಯ ಸಂಬಂಧಗಳನ್ನು ಬೆಸೆಯುವುದೇ ಧರ್ಮದ ಮೂಲ ಗುರಿಯಾಗಿದೆ ಎಂದರು.
ಮನುಷ್ಯನಲ್ಲಿರುವ ಅಸುರಿ ಗುಣಗಳು ನಾಶವಾಗಿ ದೈವೀ ಗುಣಗಳು ಬೆಳೆದುಕೊಂಡು ಬರಬೇಕಾಗಿದೆ. ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸುವುದೇ ನಿಜವಾದ ಧರ್ಮ. ಮನುಷ್ಯ ಜೀವನ ಶುದ್ಧ ಸುಂದರಗೊಳಿಸುವುದೇ ಧರ್ಮದ ಗುರಿಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾ ಸತ್ಯ ಅಸ್ತೇಯ ಬ್ರಹ್ಮಚರ್ಯ ದಯಾ ಕ್ಷಮಾ ದಾನ ಪೂಜಾ ಜಪ ಮತ್ತು ಧ್ಯಾನ ಎಂಬ ದಶವಿಧ ಧರ್ಮ ಸೂತ್ರಗಳನ್ನು ಬೋಧಿಸಿ ಸಕಲರನ್ನು ಉದ್ದರಿಸಿದ್ದಾರೆ ಎಂದು ತಿಳಿಸಿದರು.
ಯಾವಾಗಲೂ ನಾಶವಾಗದೆ ಇರುವುದು ಧರ್ಮ. ಅದನ್ನು ನಾಶ ಮಾಡುವ ಶಕ್ತಿ ಯಾರಿಗೂ ಯಾವ ಕಾಲಕ್ಕೂ ಇರುವುದಿಲ್ಲ. ಧರ್ಮ ನಾಶ ಮಾಡಲು ಬಂದವನೇ ಧರ್ಮದಿಂದ ನಾಶವಾಗುತ್ತಾನೆ. ಮನುಷ್ಯನಿಗೆ ಹೆತ್ತ ತಾಯಿ ಹೊತ್ತ ನೆಲ ಎಷ್ಟು ಮುಖ್ಯವೋ ಅಷ್ಟೇ ಧರ್ಮ ಮುಖ್ಯವೆಂಬುದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.
ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಧಾರ್ಮಿಕ ಆದರ್ಶ ಮೌಲ್ಯಗಳು ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ಸಮಾಜವನ್ನು ಸುಂದರ ಮತ್ತು ಶಾಂತಿಯುತವಾಗಿಸುತ್ತವೆ. ಧರ್ಮದ ನಿಜವಾದ ಉದ್ದೇಶ ಮನುಷ್ಯನನ್ನು ಮಾನವನನ್ನಾಗಿ ಪರಿವರ್ತಿಸುವುದು ಮತ್ತು ಸಕಲ ಜೀವಿಗಳ ಉದ್ಧಾರಕ್ಕಾಗಿ ಶ್ರಮಿಸುವುದಾಗಿದೆ ಎಂದರು.
ಗುಳೇದಗುಡ್ಡ ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಗವಂತನಿತ್ತ ಸಂಪತ್ತು ನಿಜವಾದ ಬಾಳಿನ ಅಮೂಲ್ಯ ಸಂಪತ್ತು. ವೀರಶೈವ ಧರ್ಮ ಸಿದ್ಧಾಂತದಲ್ಲಿ ಕಾಯಕ ಧರ್ಮಕ್ಕೆ ಬಹಳಷ್ಟು ಮಹತ್ವ ಕೊಟ್ಟಿದ್ದಾರೆ. ಈ ಜಗದ್ಗುರು ರೇಣುಕಾಚಾರ್ಯರು ಕಾಯಕವೇ ಕಳಾಚೈತನ್ಯವೆಂದೂ ಶರಣರು ಕಾಯಕವೇ ಕೈಲಾಸವೆಂದು ಹೇಳಿದ್ದಾರೆ ಎಂದರು.
ನ್ಯಾಯದ ಪರವಾಗಿ ನಿಲ್ಲುವುದು ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದು ಮತ್ತು ಅನ್ಯಾಯವನ್ನು ವಿರೋಧಿಸುವುದು ಧಾರ್ಮಿಕ ಆದರ್ಶಗಳಾಗಿವೆ. ಶ್ರೀರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಯಜ್ಞ ಸಕಲರನ್ನು ಸನ್ಮಾರ್ಗಗಳಿಗೆ ಕರೆದೊಯ್ಯುತ್ತಿರುವುದು ಸಂತೋಷವನ್ನುಟು ಮಾಡಿದೆ ಎಂದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ಶಾಸಕ ನಾಡೋಜ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಶಾರದಾ ಮುಳ್ಳೂರು, ಎಂ.ಬಿ. ನ್ಯಾಮಗೌಡ, ಸುರೇಶಗೌಡ ಪಾಟೀಲ, ರಾಜುಗೌಡ ಪಾಟೀಲ, ಮಹೇಶ ಕಲ್ಕತ್ತಿಮಠ, ಮಲ್ಲು ಗಣಾಚಾರಿ ಇದ್ದರು. ಸಾಹಿತಿ ಮಲ್ಲಿಕಾರ್ಜುನ ಇಂಡಿ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ, ರಘು ಹಿರೇಮಠ ನಿರೂಪಿಸಿದರು.