

ಬಾಗಲಕೋಟೆ: ಭಗ್ನಗೊಂಡ ದೇವರ ಮೂರ್ತಿಗಳನ್ನು ಸಂಗ್ರಹಿಸಿ, ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲು ನಗರದಲ್ಲಿ ವಿಸರ್ಜನಾ ಪಾತ್ರೆ ಆರಂಭಿಸಿರುವುದು ಶ್ಲಾಘನೀಯ ಕಾರ್ಯ ಎಂದು ಗುಳೇದಗುಡ್ಡ ಮರಡಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ನೇತೃತ್ವದಲ್ಲಿ ನಗರದ ಕಿಲ್ಲಾ ಪ್ರದೇಶದಲ್ಲಿ ಭಗ್ನಗೊಂಡ ಮೂರ್ತಿ, ದೇವರ ಪೋಟೋಗಳ ವಿಸರ್ಜನೆಗಾಗಿ ವಿಸರ್ಜನೆ ಪಾತ್ರೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ದೇವಾಲಯ, ಮೂರ್ತಿಗೆ ಗೌರವ ಕೊಡಬೇಕು. ಪೂಜೆಗೆ ಅರ್ಹವಲ್ಲದ ಮೂರ್ತಿಗಳನ್ನು ಭೂ ಸಮಾಧಿ, ಜಲಸಮಾಧಿ ಮಾಡುತ್ತಾರೆ. ಜನರು ತಪ್ಪು ತಿಳವಳಿಕೆಯಿಂದ ನದಿಗೆ ಹಾಕಿ, ನೀರು ಮಲೀನ ಮಾಡುತ್ತಾರೆ. ಆದ್ದರಿಂದ ಪರಿಸರ ಕಾಳಜಿ, ದೇವರ ಮೂರ್ತಿ, ಫೋಟೋಗಳಿಗೆ ಗೌರವ ನೀಡಲು ಪೂಜಾರ ಅವರು, ಇಂತಹ ಕಾರ್ಯ ಮಾಡಿದ್ದಾರೆ. ಎಲ್ಲರೂ ಇದನ್ನು ಬಳಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ದೊಡ್ಡ ದೊಡ್ಡ ಮಹಾನಗರಗಳಲ್ಲಿ ಭಗ್ನಗೊಂಡ ದೇವರ ಫೋಟೋ, ಮೂರ್ತಿ ವಿಸರ್ಜನೆಗಾಗಿ ಇಂತಹ ವ್ಯವಸ್ಥೆ ಮಾಡುತ್ತಿದ್ದು, ಬಾಗಲಕೋಟೆ ನಗರದ ಸುತ್ತಲೂ ಆಲಮಟ್ಟಿ ಹಿನ್ನೀರು, ಘಟಪ್ರಭಾ ನದಿ ಇದೆ. ಬಹುತೇಕರು, ನದಿಯಲ್ಲೇ ಭಗ್ನಗೊಂಡ ಫೋಟೋ, ಮೂರ್ತಿಗಳನ್ನು ಎಸೆಯುತ್ತಾರೆ. ಕೆಲವೊಮ್ಮೆ ಮೂರ್ತಿಗಳು, ಫೋಟೋಗಳು ತೇಲುತ್ತ ನದಿ ದಡಕ್ಕೆ ಬರುತ್ತವೆ. ಆಗ ಹಿಂದೂಗಳ ಭಾವನೆಗೆ ಘಾಸಿಯಾಗುತ್ತದೆ. ಹೀಗಾಗಿ ಈ ವಿಸರ್ಜನೆ ಪಾತ್ರೆ ಆರಂಭಿಸಲಾಗಿದೆ. ಬಾಗಲಕೋಟೆಯ ಸಮಸ್ತ ಹಿಂದೂಗಳು ಇದರ ಪ್ರಯೋಜನ ಪಡೆದು, ನದಿಯಲ್ಲಿ, ಹಿನ್ನೀರ ಪ್ರದೇಶದಲ್ಲಿ ಭಗ್ನಗೊಂಡ ಮೂರ್ತಿ, ಫೋಟೋಗಳನ್ನು ಎಸೆಯದೇ ಈ ಪಾತ್ರೆಯಲ್ಲಿ ಹಾಕಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ 25ನೇ ವರ್ಷದ ಸೇವಾ ಸಾರ್ಥಕತೆ ಹಿನ್ನೆಲೆಯಲ್ಲಿ ಈ ವಿಸರ್ಜನೆ ಪಾತ್ರೆ ಆರಂಭಿಸಲಾಗಿದೆ. ಕರುಣೆಯ ಕೈ ತುತ್ತು ಪರಿವಾರದಿಂದ ಈ ಪ್ರಯತ್ನ ಮಾಡಿದೆ. ಭಗ್ನಗೊಂಡ ಮೂರ್ತಿಗಳನ್ನು ನದಿಗೆ ಹಾಕಿ, ಜೀವಜಲ ಮಲೀನ ಮಾಡಬೇಡಿ. ಸದ್ಯ ಪ್ರಾಯೋಗಿಕವಾಗಿ ನಗರದ ಕಿಲ್ಲಾ ಭಾಗದಲ್ಲಿ ಆರಂಭಿಸಲಾಗಿದೆ ಎಂದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಪ್ರಧಾನಿ ಮೋದಿ ಅವರು ದೂರದೃಷ್ಠಿಯ ನಾಯಕ. ಈ ದೇಶವನ್ನು ಸರ್ವ ರೀತಿಯಲ್ಲಿ ಸಶಕ್ತಗೊಳಿಸಲು ಹಲವಾರು ಪ್ರಯತ್ನ ಮಾಡಿದ್ದಾರೆ. ಪಿ.ಎಚ್. ಪೂಜಾರ ಅವರು ಜೀವಜಲ ಮಲೀನ ಆಗದಂತೆ ತಡೆಯಲು, ಹಿಂದೂಗಳ ಶ್ರದ್ಧಾ-ಭಕ್ತಿಯ ವಿವಿಧ ದೇವರುಗಳ ಮೂರ್ತಿ, ಫೋಟೋಗಳನ್ನು ಗೌರವಯುತವಾಗಿ ವಿಸರ್ಜನೆ ಮಾಡಲು ಹೊಸ ಪ್ರಯತ್ನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯಪುರದ ಚರಣಮೂರ್ತಿ ಶ್ರೀಗಳು, ಡಾ.ಶೇಖರ ಮಾನೆ, ಶಂಭುಗೌಡ ಪಾಟೀಲ, ಚಂದ್ರಕಾಂತ ಕೇಸನೂರ, ರಾಜು ಚಿತ್ತವಾಡಗಿ, ರಾಜು ಗವಳಿ, ಅನಂತ ಮಳಗಿ, ಕುಮಾರ ಗಿರೀಜಾ, ರಮೇಶ ಮೋರುಟಗಿ, ಮಲ್ಲಿಕಾರ್ಜುನ ಸುರಪುರ ಇತರರು ಇದ್ದರು.