ರಬಕವಿ-ಬನಹಟ್ಟಿ: ಬನಹಟ್ಟಿ ನಗರದ ಆರಾಧ್ಯದೈವ ಕಾಡಸಿದ್ಧೇಶ್ವರ ದೇವರ ಕಳಸ ಇಳಿಸುವ ಉತ್ಸವ ಗುರುವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಸಂಜೆ 4 ಗಂಟೆಯಿಂದ ಮಂಗಳವಾರ ಪೇಟೆಯಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೋಮವಾರ ಪೇಟೆಯ ಶಂಕರ ಜುಂಜಪ್ಪನವರ ನಿವಾಸದವರೆಗೆ ತೆರಳಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಕಳಸವನ್ನು ಹೊತ್ತ ಸಣ್ಣ ತೇರಿನೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಜಯಘೋಷ ಮೊಳಗಿಸಿದರು.
ಕಳಸ ಇಳಿಸುವ ಸ್ಥಳದಲ್ಲಿ ಸಾವಿರಾರು ಭಕ್ತರು ಸೇರಿದ್ದು, ಬಳಿಕ ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಾತ್ರೆಯ ಮೊದಲ ದಿನಕ್ಕಿಂತಲೂ ಕೊನೆಯ ದಿನವಾದ ಕಳಸೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಕಳಸೋತ್ಸವದ ಅಂಗವಾಗಿ ಸಣ್ಣ ತೇರಿಗೆ ಜನರು ಹೊಳಿಗೆ, ಕಡಬು ಸೇರಿ ವಿವಿಧ ಸಿಹಿ ತಿನಿಸುಗಳನ್ನು ತಯಾರಿಸಿ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿದೆ. ಕಳಸ ಇಳಿಸುವ ದಿನ ಬಡವರಾಗಿದ್ದರೂ ಕನಿಷ್ಠ ಐದು ಜನರಿಗೆ ಅನ್ನದಾನ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ ಎಂದು ಹಿರಿಯರು ತಿಳಿಸಿದರು.
ಬನಹಟ್ಟಿ ನಗರದಲ್ಲಿ ನೆಲೆಸಿರುವ ವಿವಿಧ ಸಮುದಾಯಗಳ ಜನರು ಜಾತ್ರೆಯಲ್ಲಿ ಸೌಹಾರ್ದತೆಯಿಂದ ಪಾಲ್ಗೊಂಡರು. ಹಿಂದೂ ಸಂಸ್ಕೃತಿ, ಸಂಪ್ರದಾಯಬದ್ಧ ಆಚರಣೆ, ದಾಸೋಹ ಹಾಗೂ ಮಹಿಳೆಯರು ಭಾರತೀಯ ಸಂಪ್ರದಾಯದ ಉಡುಗೆ ತೊಡುವುದು ಜಾತ್ರೆಯ ವಿಶೇಷವಾಗಿತ್ತು. ಮುಸ್ಲಿಂರೂ ವಿಶೇಷ ಪೂಜೆ, ದಾನ-ಧರ್ಮಗಳಲ್ಲಿ ಪಾಲ್ಗೊಂಡು ಸರ್ವಧರ್ಮ ಸೌಹಾರ್ದತೆಗೆ ಸಾಕ್ಷಿಯಾದರು.
ರಬಕವಿ-ಬನಹಟ್ಟಿ: ಕಾಡಸಿದ್ಧೇಶ್ವರ ಜಾತ್ರೆಯ ಪಟಾಕಿ ಪ್ರದರ್ಶನದ ಬಳಿಕ ಬನಹಟ್ಟಿಯ ಪ್ರಮುಖ ಜಾತ್ರಾ ಮಾರ್ಗಗಳು ಪಟಾಕಿ ಅವಶೇಷಗಳಿಂದ ತುಂಬಿಕೊಂಡಿದ್ದವು. ಮಂಗಳವಾರ ಮಧ್ಯಾಹ್ನದಿಂದ ರಾತ್ರಿ 12ರವರೆಗೆ ನಡೆದ ಪ್ರದರ್ಶನದಿಂದ ಸುಮಾರು ಮೂರು ಟ್ರ್ಯಾಕ್ಟರ್ ಟ್ರಾಲಿಗಳಷ್ಟು ತ್ಯಾಜ್ಯ ಸಂಗ್ರಹವಾಗಿತ್ತು.
ಪೌರಾಯುಕ್ತ ಮಹಾಂತೇಶ ಬೀಳಗಿ ನೇತತ್ವದಲ್ಲಿ ನಗರಸಭೆಯ ನೂರಾರು ಸಿಬ್ಬಂದಿ ಬೆಳಗ್ಗೆಯೇ ಸ್ವಚ್ಛತಾ ಕಾರ್ಯ ಕೈಗೊಂಡು ದೇವಸ್ಥಾನ ಆವರಣ ಹಾಗೂ ಪ್ರಮುಖ ರಸ್ತೆಗಳನ್ನು ತ್ಯಾಜ್ಯಮುಕ್ತಗೊಳಿಸಿದರು. ತ್ವರಿತ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.