ಗುಳೇದಗುಡ್ಡ: ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ಪುರಸಭೆ ವ್ಯವಸ್ಥಾಪಕ ಎ.ಎಚ್. ಮುದ್ದೇಬಿಹಾಳ ಹೇಳಿದರು.
ನಗರದಲ್ಲಿ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾ ನಗರಾಭಿವದ್ಧಿ ಕೋಶ ಹಾಗೂ ಪುರಸಭೆ ವತಿಯಿಂದ ಹಮ್ಮಿಕೊಂಡಿರುವ ಸ್ವಚ್ಛತೆಯೇ ಸೇವೆ-2026 ಅಭಿಯಾನದಡಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಸ್ವಚ್ಛತಾ ಜಾಥಾ ನಡೆಸಿದರು.
ಜಾಥಾಕ್ಕೆ ಮುನ್ನ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಹಾಗೂ ಏಕಬಳಕೆ ವಸ್ತುಗಳ ಬಳಕೆ ತ್ಯಜಿಸುವುದು, ಕಸ ವಿಂಗಡಣೆ ಮತ್ತು ವೈಯಕ್ತಿಕ ಸ್ವಚ್ಛತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಪುರಸಭೆಯ ವ್ಯವಸ್ಥಾಪಕ ಎ.ಎಚ್ ಮುದ್ದೇಬಿಹಾಳ ಮಾತನಾಡಿ, ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸಮರ್ಪಕವಾಗಿ ವಿಂಗಡಿಸಿ ವಿಲೇವಾರಿ ಮಾಡುವುದರಿಂದ ಪರಿಸರ ಸಂರಕ್ಷಣೆ ಜತೆಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಎಂದರು.
ಪುರಸಭೆ ಸಿಬ್ಬಂದಿ ಕುಮಾರ ತಟ್ಟಿಮಠ, ಬಾಲಮ್ಮ ನಡುವಿನಮನಿ, ಗಿರೀಜಾ ಕಲ್ಯಾಣಿ, ದೀಪಾ ಉಂಕಿ, ಶಕುಂತಲಾ ಭಾಪ್ರಿ, ಭವ್ಯ ಕೊಟ್ನಳ್ಳಿ, ಸುನಿತಾ ಭೂವಿ, ದುರಗೇಶ ಹಾದಿಮನಿ, ಮುಸ್ತಾಕ ಪಟೇಲ್, ವಿನಾಯಕ ಹೋಟಿ, ವಿರೂಪಾಕ್ಷ ರಾಂಪೂರ ಹಾಗೂ ವಿದ್ಯಾರ್ಥಿಗಳು ಇದ್ದರು.