

ಜಮಖಂಡಿ: ಆಲಗೂರ, ಕಂಕಣವಾಡಿ, ಕಡಕೋಳ ಗ್ರಾಮಗಳ ಪುನರ್ವಸತಿ ಕೇಂದ್ರಗಳನ್ನು ಮತ್ತೆ ಆಯಾ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ದೇಸಾಯಿ ವೃತ್ತದಿಂದ ನಗರಸಭೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮಸ್ಥರು ತಹಸೀಲ್ದಾರ್ ಅನೀಲ ಬಡಿಗೇರ, ನಗರಸಭೆ ಆಯುಕ್ತ ಜ್ಯೋತಿ ಗಿರೀಶ, ತಾ.ಪಂ. ಇಒ ಮಲ್ಲಿಕಾರ್ಜುನ ಬಡಿಗೇರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮಸ್ಥರ ರೈತ ಸಂಘದ ಮುಖಂಡ ರಾಜು ನದಾ ಮಾತನಾಡಿ, ಆಲಗೂರ ಗ್ರಾಮದ ಪುನರ್ವಸತಿ ಕೇಂದ್ರವನ್ನು ಮತ್ತೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲು ನಗರಸಭೆಯವರು ಈ ಹಿಂದೆ ಒಪ್ಪಿಗೆ ಸೂಚಿಸಿದ್ದರು. ಆದರೆ, ಈಗ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಇದರಿಂದ ನಮ್ಮೂರಿನ ಅಸ್ತಿತ್ವವೇ ಅಳಿದು ಹೋಗುವ ಸಾಧ್ಯತೆಯಿದೆ. ಸರ್ಕಾರ ಕೂಡಲೇ ನಗರಕ್ಕೆ ಹೊಂದಿಕೊಂಡಿರುವ ಪುನರ್ವಸತಿ ಕೇಂದ್ರಗಳನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕು. ಇಲ್ಲದಿದ್ದರೆ ಜಾನುವಾರುಗಳ ಸಮೇತ ನಗರಕ್ಕೆ ಆಗಮಿಸಿ ಜಮಖಂಡಿ ನಗರ ಬಂದ್ ಮಾಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಜಗದೀಶ ಗುಡಗುಂಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ನಮ್ಮ ಗ್ರಾಮಗಳನ್ನು ನಮಗೆ ಮರಳಿ ನೀಡಬೇಕು. ಗ್ರಾಮಗಳ ಅಸ್ತಿತ್ವ ಉಳಿಯಬೇಕು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡೋಣ. ಗ್ರಾಮಗಳು ನಮ್ಮ ಭಾವನೆಗಳೊಂದಿಗೆ ಬೆಸೆದುಕೊಂಡಿವೆ. ಅವು ನಮ್ಮೊಂದಿಗೆ ಉಳಿಯಬೇಕು ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಸರ್ಕಾರಕ್ಕೆ ನಮ್ಮ ಸಮಸ್ಯೆಗಳು ಅರ್ಥವಾಗುತ್ತಿಲ್ಲ. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಅಡಿಗಳಿಗೆ ಹೆಚ್ಚಿಸುವುದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀರಿನ ಲಾಭವಾಗಬಹುದು. ಆದರೆ, ಈ ಭಾಗದ ರೈತರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಸರ್ಕಾರದಿಂದ ಸೂಕ್ತ ಕ್ರಮ ಹಾಗೂ ಪರಿಹಾರ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಪ್ಪಿಗೆ ಪತ್ರ ನೀಡಿದರೆ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಜಲಾಶಯದ ನೀರು ನಿಲ್ಲುವುದರಿಂದ ಭೂಮಿ ಸವಳು ಸಮಸ್ಯೆಗೆ ತುತ್ತಾಗುತ್ತಿದೆ. ಕಾವೇರಿ ವಿಚಾರ ಬಂದಾಗ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಾರೆ. ಆದರೆ, ಕೃಷ್ಣಾ ನದಿ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
ಜಮಖಂಡಿ ನಗರಸಭೆ ವ್ಯಾಪ್ತಿಯ ಸರ್ವೇ ನಂಬರ್‌ಗಳಲ್ಲಿ ಗ್ರಾಮಗಳ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಿರುವುದರಿಂದ ಗ್ರಾಮಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ನಮ್ಮ ಹಕ್ಕುಗಳನ್ನು ಮರಳಿ ಪಡೆಯಲು ನ್ಯಾಯಾಲಯದ ಮೂಲಕ ಹೋರಾಟ ಅಥವಾ ಉಗ್ರ ಹೋರಾಟಕ್ಕೂ ನಾವು ಸಜ್ಜಾಗಬೇಕು ಎಂದು ಹೇಳಿದರು.
ಸದಾಶಿವ ಕಡಕೋಳ, ಮಹಾದೇವ ಹನಗಂಡಿ, ಸಿ.ಟಿ. ಉಪಾಧ್ಯೆ, ಯೋಗಪ್ಪ ಸವದಿ ಮಾತನಾಡಿದರು. ಅಣ್ಣೇಶ ಪರಮಗೊಂಡ, ಸಚೀನ ಖಿದ್ರಾಪುರ, ಶ್ರೀಮಂತ ಖಿದ್ರಾಪೂರ, ವೃಷಭ ನರಸಗೊಂಡ, ಶಿವು ಪತ್ತಾರ, ನೇಮಿನಾಥ ಹಳಿಂಗಳಿ, ನಿಂಗಪ್ಪ ಪರಮಗೊಂಡ, ದೇವಪ್ಪ ನ್ಯಾಮಗೌಡ, ಹನುಮಂತ ಖಾನಾಪುರ, ಅಭಿನಂದನ ಪರಮಗೊಂಡ, ಮಲ್ಲಿನಾಥ ನ್ಯಾಮಗೌಡ, ಮಹಾವೀರ ಉಪಾಧ್ಯೆ ಇತರರಿದ್ದರು.