ಬಾಗಲಕೋಟೆ: ಪಿಂಚಣಿ ಸಂಬಂಧಿತ ಸಮಸ್ಯೆಗಳಿಗೆ ಪಿಂಚಣಿದಾರರು ನೇರವಾಗಿ ತಮ್ಮ ಅಹವಾಲು ಸಲ್ಲಿಸಲು ಲೋಕಾ ಅದಾಲತ್ ಉತ್ತಮ ವೇದಿಕೆಯಾಗಿದೆ ಎಂದು ಪಿಂಚಣಿ ಅದಾಲತ್ ಮಹಾಲೇಖಪಾಲರ ಕಚೇರಿ ಉಪ ಮಹಾಲೇಖಪಾಲಕಿ ಅಂಜಲಿ ಭಾರದ್ವಾಜ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್ಗೆ ಚಾಲನೆ ನೀಡಿ ಅವರು ಮಾತನಾಡಿ, ಪಿಂಚಣಿದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಪಿಂಚಣಿ ಅದಾಲತ್ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪಿಂಚಣಿ ಮಂಜೂರಾತಿ, ಪಿಂಚಣಿ ಪರಿಷ್ಕರಣೆ, ಪಿಂಚಣಿ ಪಾವತಿ, ಕುಟುಂಬ ಪಿಂಚಣಿ, ಬಾಕಿ ಮೊತ್ತ ಹಾಗೂ ಇತರೆ ಪಿಂಚಣಿ ಸಂಬಂಧಿತ ಸಮಸ್ಯೆಗಳ ಕುರಿತು ಪಿಂಚಣಿದಾರರು ನೇರವಾಗಿ ತಮ್ಮ ಅಹವಾಲು ಸಲ್ಲಿಸಬಹುದು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ಸಮಸ್ಯೆಗಳ ಕುರಿತು ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿ, ವಿವಿಧ ಇಲಾಖೆಗಳ ನಿವೃತ್ತ ನೌಕರರು ಹಾಗೂ ಪಿಂಚಣಿದಾರರೊಂದಿಗೆ ನೇರವಾಗಿ ಸಂವಾದ ನಡೆಸಿದರು.
ಸರ್ಕಾರಿ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯರಾವ್ ಕುಲಕರ್ಣಿ ಅವರು, ಬಾಗಲಕೋಟೆ ಜಿಲ್ಲೆಯಲ್ಲಿ ಅಂದಾಜು 29 ಸಾವಿರ ನಿವತ್ತ ನೌಕರರು ಪಿಂಚಣಿ ಪಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 23 ಪಿಂಚಣಿದಾರರ ಸಮಸ್ಯೆಗಳು ಇದ್ದು, ಅವುಗಳನ್ನು ಪರಿಹರಿಸಲು ಮನವಿ ಮಾಡಿಕೊಂಡಾಗ ಇದಕ್ಕೆ ಸಂಬಂಧಿಸಿದ ಮಹಾಲೇಖಪಾಲರ ಕಚೇರಿಗೆ ನೀಡಿದ ಮಾಹಿತಿ ಪ್ರತಿಯನ್ನು ನೀಡಿದಲ್ಲಿ ತ್ವರಿತವಾಗಿ ಬಗೆಹರಿಸುವ ಕೆಲಸ ಮಾಡಲಾಗುವುದೆಂದು ಹಿರಿಯ ಲೆಕ್ಕಾಧಿಕಾರಿ ನಾಗಜ್ಯೋತಿ ಅವರು ತಿಳಿಸಿದರು.
ಅದಾಲತ್ನಲ್ಲಿ ಹಲವು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡು ತಮ್ಮ ಇಲಾಖೆಯ ಪಿಂಚಣಿದಾರರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಹಲವು ವಷರ್ಗಳಿಂದ ಬಾಕಿ ಇರುವ ಪ್ರಕರಣಗಳು, ದಾಖಲೆಗಳ ತಿದ್ದುಪಡಿ, ಪಿಂಚಣಿ ಲೆಕ್ಕಾಚಾರ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಪ್ರತಿಯೊಂದು ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳಿಂದ ಪರಿಶೀಲಿಸಿ, ನಿಯಮಾನುಸಾರ ಶೀಘ್ರ ಪರಿಹಾರ ಕಲ್ಪಿಸಲಾಗುವುದೆಂದು ತಿಳಿಸಿದರು.
ಪಿಂಚಣಿದಾರರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸುವುದು ಹಾಗೂ ಪಿಂಚಣಿ ಸಂಬಂಧಿತ ಕುಂದುಕೊರತೆಗಳಿಗೆ ಒಂದೇ ವೇದಿಕೆಯಲ್ಲಿ ಸ್ಪಂದಿಸುವುದು ಪಿಂಚಣಿ ಅದಾಲತ್ನ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪಿಂಚಣಿದಾರರಿಂದ ಸ್ವೀಕರಿಸಿದ ಅರ್ಜಿಗಳು ಹಾಗೂ ಅಹವಾಲುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು.
ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಲೆಕ್ಕಾಧಿಕಾರಿಗಳಾದ ಗೌಡರ, ಗೋಪಾಲಕೃಷ್ಣ, ಸುಧಾ ಇತರೆ ಅಧಿಕಾರಿಗಳು ಇದ್ದರು.