ಧರ್ಮದ ಬೆಳಕು ಬದುಕನ್ನು ಪಾವನಗೊಳಿಸಲಿ: ಶ್ರೀ ರಂಭಾಪುರಿ ಜಗದ್ಗುರುಗಳ ಹೇಳಿಕೆ

ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ
ಜಮಖಂಡಿ ನಗರದ ಮೈಗೂರ ಕಲೂತಿ ಕಲ್ಯಾಣ ಮಂಟಪದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.
ಜಮಖಂಡಿ ನಗರದ ಮೈಗೂರ ಕಲೂತಿ ಕಲ್ಯಾಣ ಮಂಟಪದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.
Published on: 

ಜಮಖಂಡಿ: ಪ್ರತಿಯೊಂದು ಮನೆಯಲ್ಲೂ ಸಂಸ್ಕಾರದ ಬೆಳಕು ಮೂಡಬೇಕು. ಪ್ರತಿಯೊಬ್ಬ ಯುವಕರಲ್ಲೂ ಆತ್ಮವಿಶ್ವಾಸ ಬೆಳೆಯಬೇಕು. ಧರ್ಮ ನಮ್ಮೆಲ್ಲರ ಬದುಕಿನಲ್ಲಿ ಪ್ರೀತಿ, ಶಾಂತಿ, ಸೇವೆ ಮತ್ತು ಸತ್ಯದ ರೂಪದಲ್ಲಿ ಕಾಣುವಂತಾಗಬೇಕು. ಧರ್ಮದ ಬೆಳಕು ನಮ್ಮೆಲ್ಲರ ಬಾಳ ಬದುಕನ್ನು ಪಾವನಗೊಳಿಸುವುದರಲ್ಲಿ ಯಾವುದೇ ಸಂದೇಹ ಇಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ನಗರದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 7ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ಅವರು ನೀಡಿ, ಧರ್ಮವೆಂದರೆ ಕೇವಲ ಆಚರಣೆಯಲ್ಲ. ಅದು ಜೀವನದ ನಡವಳಿಕೆಯಾಗಿದೆ. ದೇವಸ್ಥಾನಕ್ಕೆ ಹೋಗುವ ಪೂಜೆ ಮಾಡುವ ಮಂತ್ರ ಪಠಿಸುವ ಆಚರಣೆ ನಾವು ಮಾಡುತ್ತೇವೆ. ಇವೆಲ್ಲವೂ ಭಕ್ತಿಯ ಅಭಿವ್ಯಕ್ತಿಗಳಾಗಿವೆ. ಆದರೆ ಧರ್ಮದ ನಿಜವಾದ ಸೌಂದರ್ಯ ನಮ್ಮ ನಡವಳಿಕೆಯಲ್ಲಿ ವ್ಯಕ್ತವಾಗಬೇಕು ಎಂದರು.

ಸತ್ಯ ಮಾತನಾಡುವುದು ಧರ್ಮ. ಪರರ ನೋವಿಗೆ ಸ್ಪಂದಿಸುವುದು ಧರ್ಮ. ತಂದೆ ತಾಯಿಗಳನ್ನು ಗುರು ಹಿರಿಯರನ್ನು ಗೌರವಿಸುವುದು ಧರ್ಮ. ದುರ್ಬಲರಿಗೆ ಸಹಾಯ ಮಾಡುವುದು ಮತ್ತು ತಪ್ಪು ದಾರಿಯಲ್ಲಿ ನಡೆಯುವವನಿಗೆ ಸರಿಯಾದ ದಾರಿ ತೋರಿಸುವುದು ಧರ್ಮ. ಒಬ್ಬ ವ್ಯಕ್ತಿ ದೇವರ ಮುಂದೆ ದೀಪ ಹಚ್ಚಬಹುದು. ಆದರೆ ಆತನು ತಮ್ಮ ಕುಟುಂಬದವರಿಗೆ ನೋವುಂಟು ಮಾಡುತ್ತಾನೆ ಎಂದಾದರೆ ಅದು ಧರ್ಮವಲ್ಲ. ದೇವರ ಮುಂದೆ ಬೆಳಗುವ ದೀಪಕ್ಕಿಂತಲೂ ನಮ್ಮ ಹದಯದಲ್ಲಿ ಬೆಳಗುವ ಸತ್ಯ ದೀಪ ಮುಖ್ಯವಾಗಿದೆ. ಕತ್ತಲೆಯ ಕೋಣೆಯಲ್ಲಿ ಒಂದು ಸಣ್ಣ ದೀಪ ಹಚ್ಚಿದರೆ ಸಾಕು ಬೆಳಕು ಮೂಡುತ್ತದೆ. ಅದರಂತೆ ಮನುಷ್ಯ ಜೀವನದಲ್ಲಿ ಅಜ್ಞಾನ ಕಳೆದು ಜ್ಞಾನ ಬೆಳಕಿನ ಹೆಜ್ಜೆ ಹಾಕಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಮೂಲ್ಯವಾದ ಜೀವನ ದರ್ಶನ ಸಂದೇಶವನ್ನು ಸಿದ್ದಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದರು.

ಡಾ. ಮಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವ್ಯಸನವು ಮನುಷ್ಯನ ಬದುಕನ್ನು ಹಾಳು ಮಾಡುತ್ತದೆ. ಧರ್ಮವು ಅವನ ಅಂತರಂಗದ ಬೆಳಕನ್ನು ಜಾಗತಗೊಳಿಸುತ್ತದೆ. ಜೀವನದಲ್ಲಿ ಬೇಕಾದಷ್ಟು ಸಾಧನೆ ಮಾಡಿದವರು ದುಶ್ಚಟಗಳಿಗೆ ಬಲಿಯಾದರೆ ಜೀವನ ಆದರ್ಶವಾಗಿರಲು ಸಾಧ್ಯವಾಗದು. ಧರ್ಮ ವಿವೇಕ ಆತ್ಮಜ್ಞಾನ ಮತ್ತು ಸತ್ಸಂಗಗಳು ಮನುಷ್ಯನಿಗೆ ಸರಿಯಾದ ದಾರಿಯನ್ನು ತೋರಿಸುವ ದೀಪಗಳಾಗುತ್ತವೆ. ಮದ್ಯಪಾನ ತಂಬಾಕು ಸೇವನೆ ಮಾದಕ ವಸ್ತುಗಳ ಬಳಕೆ ಜೂಜಾಟ ಹಾಗೂ ನಿಯಂತ್ರಣ ತಪ್ಪಿದ ಬದುಕು ಜೀವನವನ್ನು ಹಾನಿಗೊಳಿಸುತ್ತದೆ. ಸಜ್ಜನರ ಒಡನಾಟದಲ್ಲಿ ಬದುಕಿ ಆದರ್ಶ ಬದುಕನ್ನು ಕಟ್ಟಿಕೊಳ್ಳಬೇಕೆಂದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಸಿಂದಗಿ ಸಾರಂಗ ಗಚ್ಚಿನ ಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಅಸತ್ಯದಿಂದ ಸತ್ಯ ಸಾಕ್ಷಾತ್ಕಾರದ ಕಡೆಗೆ ಕತ್ತಲೆಯಿಂದ ಬೆಳಕಿನ ಕಡೆಗೆ ಸಾವಿನಿಂದ ಸಾವಿಲ್ಲದ ಕಡೆಗೆ ಮುನ್ನಡೆ ಗುರಿ ಮನುಷ್ಯನದಾಗಬೇಕು. ಆತ್ಮ ವಿಶ್ವಾಸ ನಿಶ್ಚಿತವಾದ ಗುರಿ ಮತ್ತು ಸಂಯಮ ಇವು ಯಶದ ಹಾದಿಗೆ ಒಯ್ಯುವ ಪ್ರಮುಖ ಅಂಶಗಳಾಗಿವೆ. ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡು ಮುಖ್ಯ. ಶ್ರೀ ಜಗದ್ಗುರು ಪಂಚಾಚಾರ್ಯರ ತತ್ವ ಸಿದ್ಧಾಂತಗಳ ವಿಚಾರಧಾರೆ ಮಾನವ ಜೀವನದ ವಿಕಾಸಕ್ಕೆ ಅಡಿಪಾಯ. ಜಮಖಂಡಿಯಲ್ಲಿ ನಡೆದಿರುವ ಶ್ರೀ ರಂಭಾಪುರಿ ಜಗದ್ಗುರುಗಳ ಧರ್ಮ ಯಜ್ಞ ಸಕಲರ ಬಾಳಿಗೆ ಬೆಳಕು ತೋರಲಿದೆ ಎಂದರು.

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿದರು. ಮುತ್ತೂರ ವಿರಕ್ತಮಠದ ಗುರುಸಿದ್ದೇಶ್ವರ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಶಾಸಕರಾದ ನಾಡೋಜ ಜಗದೀಶ ಗುಡಗುಂಟಿ, ಶರಣು ಸಲಗರ, ಸಿದ್ದು ಸವದಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಜಿ.ಎಸ್. ನ್ಯಾಮಗೌಡ, ಎಂ.ಕೆ. ಪಟ್ಟಣಶೆಟ್ಟಿ, ಆನಂದ ಗಣಾಚಾರಿ, ರಮೇಶ ತೇಲಿ, ಬಸವಂತಪ್ಪ ಹನಗಂಡಿ, ರವೀಂದ್ರ ನೀಲನಾಣಿ, ಲವ ಪೂಜಾರಿ ಇತರರಿದ್ದರು.

ಹುನ್ನೂರಿನ ಬಸಯ್ಯ ಸಿದ್ಧಗಿರಿಮಠ ಸ್ವಾಗತಿಸಿದರು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತವಿಕವಾಗಿ ಮಾತನಾಡಿದರು, ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net