ಕನ್ನಡ ಸಾಹಿತ್ಯ ಸಮ್ಮೇಳನದ ಆಯ್ಕೆ ಪ್ರಕ್ರಿಯೆ ಸ್ಪಷ್ಟತೆ ನೀಡಿ

ರಾಜ್ಯ ಕಾರ್ಯದರ್ಶಿ ಗೋಪಿನಾಥ ಮೀಸಿ ಆಗ್ರಹ ಸಾಹಿತಿಗಳನ್ನು ಕಡೆಗಣಿಸಿರುವ ಆರೋಪ ಕಪ್ಪು ಪಟ್ಟಿ ಪ್ರದರ್ಶನದ ಎಚ್ಚರಿಕೆ
ಜಮಖಂಡಿ ನಗರದಲ್ಲಿ ಆಯೋಜಿಸಿದ್ದ  ಸುದ್ದಿಗೊಷ್ಠಿಯಲ್ಲಿ ಗೋಪಿನಾಥ ಮೀಸಿ ಮಾತನಾಡಿದರು. ಭೀಮ ಆರ್ಮಿ ಜಿಲ್ಲಾಧ್ಯಕ್ಷ ರಮೇಶ ಬಳೋಲಗಿಡದ, ಮುಖಂಡ ಚನ್ನಬಸು ಗುಣದಾಳ, ವಕೀಲ ಚಿದಾನಂದ ಜನವಾಡ ಇತರರಿದ್ದರು.
ಜಮಖಂಡಿ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಗೋಪಿನಾಥ ಮೀಸಿ ಮಾತನಾಡಿದರು. ಭೀಮ ಆರ್ಮಿ ಜಿಲ್ಲಾಧ್ಯಕ್ಷ ರಮೇಶ ಬಳೋಲಗಿಡದ, ಮುಖಂಡ ಚನ್ನಬಸು ಗುಣದಾಳ, ವಕೀಲ ಚಿದಾನಂದ ಜನವಾಡ ಇತರರಿದ್ದರು.
Published on: 

ಜಮಖಂಡಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಜವಾದ ಸಾಹಿತಿಗಳನ್ನು ಹೊರಗಿಟ್ಟು, ಕನ್ನಡದ ಗಾಳಿ ಗಂಧ ಗೊತ್ತಿರದ, ರಾಜಕೀಯ ಮುಖಂಡರು ಹಾಗೂ ಹಣವಂತರನ್ನು ಪದಾಧಿಕಾರಿಗಳನ್ನಾಗಿ ಮಾಡಿಕೊಂಡು 10ನೇ ಕನ್ನಡ ಸಾಹಿತ್ಯ ಸಮ್ಮೇನ ಮಾಡುತ್ತಿರುವುದು ಖಂಡನೀಯ ಎಂದು ಪ್ರಜಾ ಪರಿವರ್ತನೆ ವೇದಿಕೆ ರಾಜ್ಯ ಕಾರ್ಯದರ್ಶಿ ಗೋಪಿನಾಥ ಮೀಸಿ ಆಕ್ಷೇಪ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಜವಾಬ್ದಾರಿಗಳಲ್ಲಿ ಸಾಹಿತಿಗಳಿಗೆ ಆದ್ಯತೆ ನೀಡುವ ಬದಲು ರಾಜಕೀಯ ಹಿನ್ನೆಲೆಯುಳ್ಳವರಿಗೆ ಅವಕಾಶ ಕಲ್ಪಿಸಲಾಗಿದೆ. ಕಸಾಪ ಪದಾಧಿಕಾರಿಗಳ ಕಾರ್ಯವೈಖರಿ ಹಾಗೂ ಸಮ್ಮೇಳನದ ಆಯ್ಕೆ ಪ್ರಕ್ರಿಯೆ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟತೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಭೀಮ ಆರ್ಮಿ ಜಿಲ್ಲಾಧ್ಯಕ್ಷ ರಮೇಶ ಬಳೋಲಗಿಡದ ಮಾತನಾಡಿ, ಸಮ್ಮೇಳನದ ಹೆಸರಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳಿದ್ದು, ಇದಕ್ಕೆ ಸಂಬಂಧಿಸಿದಂತೆ ರಸೀದಿ ಹಾಗೂ ಸಂಪೂರ್ಣ ಲೆಕ್ಕಪತ್ರಗಳನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಚನ್ನಬಸು ಗುಣದಾಳ ಮಾತನಾಡಿ, ಹಲವಾರು ದತ್ತಿನಿಧಿಗಳು ಎಲ್ಲಿವೆ? ಯಾವ ಬ್ಯಾಂಕ್‌ನಲ್ಲಿ ಠೇವಣಿ ಮಾಡಿದ್ದಾರೆ? ಅಥವಾ ವೈಯಕ್ತಿಕವಾಗಿ ಬಳಸಿಕೊಂಡಿದ್ದಾರಾ? ಕಳೆದ ನಾಲ್ಕು ವರ್ಷದಿಂದ ಭಾರಿ ಪ್ರಮಾಣದ ಹಣ ಸಂಗ್ರಹಮಾಡಿ ಅವ್ಯವಹಾರ ಮಾಡಿರುವ ಗುಮಾನಿ ಇದೆ. ಆದ್ದರಿಂದ ಎಲ್ಲ ಲೆಕ್ಕಪತ್ರವನ್ನು ಸಾರ್ವಜನಿಕರ ಮುಂದೆ ಇಡಬೇಕು. ಬಿಜೆಪಿ ಮುಖಂಡರ ಮನೆಗಳಲ್ಲಿ ಕಸಾಪ ಕಾರ್ಯಕ್ರಮ ನಡೆಯುತ್ತವೆ ಎಂದರು.

ವಕೀಲ ಚಿದಾನಂದ ಜನವಾಡ ಮಾತನಾಡಿ, ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಭಾನುವಾರ ನಡೆಯಲಿರುವ ಸಮ್ಮೇಳನದಲ್ಲಿ ಕಪ್ಪುಪಟ್ಟಿ ಧರಿಸಿ ಕಪ್ಪು ಧ್ವಜ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net