ಕನ್ನಡ ನಾಡಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ KANNADA

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಧ್ವಜಾರೋಹಣ ನೆರವೇರಿಸಿದರು.
ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಧ್ವಜಾರೋಹಣ ನೆರವೇರಿಸಿದರು.
Published on
ಬಾಗಲಕೋಟೆ : ಕನ್ನಡ ನಾಡಿನಲ್ಲಿ ಮಾತೃಭಾಷೆ ಕನ್ನಡಕ್ಕೆ ಪ್ರಥಮ ಆದ್ಯತೆ ಎಂಬ ನೀತಿಯನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಇದಕ್ಕೆ ಪೂರಕವಾಗಿ ಎಲ್ಲ ಹಂತಗಳಲ್ಲಿ ಕನ್ನಡದ ಅನುಷ್ಠಾನಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನು ಸದೃಢವಾಗಿ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜರುಗಿದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ನೆಲದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಪರಂಪರೆ ಆರಾಽಸುತ್ತಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ೩ನೇ ಹಂತದ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಆಲಮಟ್ಟಿ ಜಲಾಶಯವನ್ನು ೫೧೯.೬ ಮೀಟರ್‌ನಿಂದ ೫೨೪.೨೫೬ ಮೀಟರ್‌ಗೆ ಎತ್ತರಿಸುವುದರಿಂದ ಮುಳುಗಡೆಯಾಗುವ ರೈತರ ನೀರಾವರಿ ಜಮೀನು ಎಕರೆಗೆ ೪೦ ಲಕ್ಷ ರೂ. ಖುಷ್ಕಿ ಒಣಭೂಮಿ ಎಕರೆಗೆ ೩೦ ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಅಗತ್ಯವಿರುವ ಹೆಚ್ಚುವರಿ ೭೫ ಸಾವಿರ ಕೋಟಿ ರೂ. ಮೊತ್ತವನ್ನು ನಾಲ್ಕು ಆರ್ಥಿಕ ವರ್ಷದಲ್ಲಿ ಭರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಕ್ಕೆ ಶೀಘ್ರದಲ್ಲಿಯೇ ಭೂಮಿಪೂಜೆ ನೆರವೇರಿಸಲಾಗುತ್ತದೆ. ಅದಕ್ಕೆ ಅವಶ್ಯವಿರುವ ಕಾಲೇಜ ಕಟ್ಟಡ, ಬಾಲಕರ, ಬಾಲಕಿಯರ ಹಾಸ್ಟೇಲ್‌ಗಳು, ಬೋಧಕ ಸಿಬ್ಬಂದಿ ವಸತಿ ಗೃಹಗಳು ಹಾಗೂ ಇತರೆ ಪೂರಕವಾದ ಕಾಮಗಾರಿಗಳಿಗೆ ಅವಶ್ಯವಿರುವ ೪೫೦ ಕೋಟಿ ರೂ. ಗಳ ಅನುದಾನಕ್ಕೆ ಮಂಜೂರಾತಿ ನೀಡಲಾಗಿದೆ. ಜಿಲ್ಲೆಯಲ್ಲಿ ಕೈಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಶೇ. ೯೯.೫೬ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿದರು.
ಮುಧೋಳ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ೨೧೦ ಕೋಟಿ ರೂ. ಗಳ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ನವನಗರದ ಯುನಿಟ್-೧ ಮತ್ತು ೨ರಲ್ಲಿ ಮೂಲ ಸೌಲಭ್ಯಕ್ಕಾಗಿ ೧೮.೪೮ ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ತಿಳಿಸಿದರು.
ಪ್ರಸಿದ್ದ ಐತಿಹಾಸಿಕ ತುಳಸಿಗೇರಿ ಆಂಜನೇಯ ದೇವಸ್ಥಾನ ಮೂಲ ಸೌಲಭ್ಯ ಅಭಿವೃದ್ಧಿಗೆ ೧.೭೦ ಕೋಟಿ ರೂ.ಗಳ ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಬೀಳಗಿ ತಾಲೂಕಿನ ಹೆರಕಲ್ ಬ್ಯಾರೇಜ್ ಪ್ರದೇಶದಲ್ಲಿ ಜಂಗಲ್ ರೆಸಾರ್ಟ್, ವಾಟರ್ ಸೋರ್ಟ್ಸ ಮತ್ತು ಬೋಟಿಂಗ್ ಪಕ್ಷಿ ವೀಕ್ಷಣಾ ಕೇಂದ್ರ, ಚಟುವಟಿಕೆ ಸೇರಿ ಚಿಕ್ಕ ಸಂಗಮದಲ್ಲಿ ಸಂಗಮೇಶ್ವರ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಸಮೂಹ ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಪಥ ಸಂಚಲನದಲ್ಲಿ ವಿಜೇತರಾದವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ. ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಅಪರ ಜಿಲ್ಲಾಽಕಾರಿ ಅಶೋಕ ತೇಲಿ, ಉಪವಿಭಾಗಾಽಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ವಾಸುದೇವಸ್ವಾಮಿ ಮತ್ತಿತರರು ಇದ್ದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಒಟ್ಟು ೪೭ ಸಾಧಕರಿಗೆ ಜಿಲ್ಲಾಡಳಿತದ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಜನಪ್ರತಿನಿಽಗಳು, ಅಽಕಾರಿಗಳು ಸನ್ಮಾನಿಸಿದರು.

ಸ್ತಬ್ಥ ಚಿತ್ರ ಪ್ರದರ್ಶನದಲ್ಲಿ ಎನ್‌ಡಬ್ಲುಕೆಆರ್‌ಟಿಸಿ ಪ್ರಥಮ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಸ್ಥಬ್ದಚಿತ್ರಗಳ ಪ್ರದರ್ಶನದಲ್ಲಿ ಬಾಗಲಕೋಟೆಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆಯ ಘಟಕದಿಂದ ತಯಾರಿಸಿದ ಶಕ್ತಿ ಯೋಜನೆಯ ವಿಶ್ವ ದಾಖಲೆಯ ಗರಿ ಎಂಬ ಸ್ತಬ್ಧ ಚಿತ್ರ ಪ್ರಥಮ ಸ್ಥಾನ ಪಡೆದುಕೊಂಡಿತು. ಪ್ರದರ್ಶನದಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ದೃಶ್ಯದ ಜೊತೆಗೆ ಹಂಪಿಯ ಕಲ್ಲಿನ ತೇರು ಹಾಗೂ ವಿವಿಧ ಕಲೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರ ಇದಾಗಿತ್ತು. ಪ್ರತಿ ವರ್ಷವೂ ಎನ್‌ಡಬ್ಲುಕೆಎಸ್‌ಆರ್‌ಟಿಸಿಯ ಸ್ತಬ್ಧ ಚಿತ್ರವು ಪ್ರಥಮ ಸ್ಥಾನ ಪಡೆದುಕೊಂಡು ಬರುತ್ತಿರುವುದು ಗಮನಾರ್ಹ. ಐತಿಹಾಸಿಕ ಮೈಸೂರು ಅರಮನೆ, ಹಂಪಿಯ ಕಲ್ಲಿನ ರಥ, ಬೇಲೂರು ಹಳೆಬೀಡಿನ ಶಿಲ್ಪಕಲೆ, ಮಕ್ಕಳು ಧರಿಸಿದ ಕಿತ್ತೂರ ರಾಣಿ ಚನ್ನಮ್ಮ, ವನಕೆ ಓಬವ್ವ, ರಾಣಿ ಅಬ್ಬಕ್ಕ ಸೇರಿ ಅನೇಕ ಮಹನೀಯರ ವೇಷಭೂಷಣ ಬಿಂಬಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತಬ್ಧಚಿತ್ರ ದ್ವಿತೀಯ ಸ್ಥಾನ ಪಡೆದರೆ, ಹಿಪ್ಪೆನೇರಳೆ ಬೇಸಾಯ ಕ್ರಮಗಳು ಹಾಗೂ ರೇಷ್ಮೆಯಿಂದ ಉತ್ಪಾದಿಸಿದ ವಿವಿಧ ಉತ್ಪನ್ನಗಳ ಪ್ರದರ್ಶಿಸಿದ ರೇಷ್ಮೆ ಇಲಾಖೆ ಮತ್ತು ವಿವಿಧ ತರಕಾರಿಗಳಿಂದ ತಯಾರಿಸಿದ ಪಾತರಗಿತ್ತಿ ಹಾಗೂ ವಿವಿಧ ಯೋಜನೆಗಳ ಮಾಹಿತಿಯನ್ನೊಳಗೊಂಡ ತೋಟಗಾರಿಕೆ ಇಲಾಖೆ ಸ್ತಬ್ಧ ಚಿತ್ರಗಳು ತೃತೀಯ ಸ್ಥಾನ ಪಡೆದುಕೊಂಡವು. ಪ್ರಾರಂಭದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಕನ್ನಡಾಂಬೆಯ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ ಜಿಲ್ಲಾಧಿಕಾರಿ ಸಂಗಪ್ಪ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು, ಗೊಂಬೆ ಕುಣಿತ, ವಿವಿಧ ಇಲಾಖೆಯವರು ತಯಾರಿಸಿದ ಸ್ತಬ್ಧ ಚಿತ್ರಗಳು ಎಲ್ಲರನ್ನು ಆಕರ್ಷಿಸಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net