

ರಬಕವಿ/ಬನಹಟ್ಟಿ : ರೈತರ ಕಬ್ಬಿಗೆ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಕಳೆದ 10 ದಿನಗಳಿಂದ ಅನ್ನ, ನೀರು ತ್ಯಜಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಆಚಾರ್ಯ ಶ್ರೀ 108 ಕುಲರತ್ನಭೂಷಣ ಮಹಾರಾಜರಿಗೆ ಉಪವಾಸ ಕೈಬಿಡುವಂತೆ ತಾಲೂಕು ಆಡಳಿತದ ಅಧಿಕಾರಿಗಳು ಶುಕ್ರವಾರ ಮನವಿ ಮಾಡಿದರು.
ರೈತರ ಹಿತಕ್ಕಾಗಿ ಮುನಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಅಧಿಕಾರಿಗಳು, ನಿರಂತರ ಉಪವಾಸದಿಂದ ಮುನಿಗಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ದೇಹಕ್ಕೆ ನೀರು ಅತ್ಯವಶ್ಯಕವಾಗಿದೆ. ಆದ್ದರಿಂದ ನೀರು ಸೇವಿಸುವಂತೆ ವಿನಂತಿಸಿದರು.
ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಮುನಿಗಳು, ರೈತರಿಗೆ ಬೆಂಬಲ ಬೆಲೆ ಘೋಷಿಸುವವರೆಗೆ ಉಪವಾಸ ಕೈಬಿಡುವುದಿಲ್ಲ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು. ಆದರೆ, ಆರೋಗ್ಯದ ಹಿತದಷ್ಟಿಯಿಂದ ಶನಿವಾರದಿಂದ ನೀರು ಕುಡಿಯಲು ಮುನಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ತೇರದಾಳ ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಕಂದಾಯ ಅಧಿಕಾರಿ ಪಿ.ಆರ್. ಮಠಪತಿ, ಗ್ರಾಮ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಖವಟಗೊಪ್ಪ ಸೇರಿ ರೈತರಾದ ಚಿಕ್ಕಪ್ಪ ಹಿಪ್ಪರಗಿ, ಭರತೇಶ ಹುಕ್ಕೇರಿ, ಡಾ. ಬಾಹುಬಲಿ ಶೆಟ್ಟಿ, ಭೂಪಾಲಿ ಹಿಪ್ಪರಗಿ, ಅಜಿತ ಮುಗ್ಗನ್ನವರ, ಬಾಹುಬಲಿ ನೇಮಗೌಡ, ಭರತೇಶ ಡುಮ್ಮನವರ ಹಾಗೂ ಆದೇಶ ಕುಳ್ಳಿ ಇದ್ದರು.