ಸಾಲ ಮಾಡಿ ಕಡಿದು ಕಟ್ಟೆ ಹಾಕಿದ್ದೇನು?

 ಬಾಗಲಕೋಟೆಯಲ್ಲಿ ಬುಧವಾರ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮಾತನಾಡಿದರು. ಮಾಜಿ ಸಚಿವ ಮುರುಗೇಶ ನಿರಾಣಿ, ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಶಾಸಕ ದುರ್ಯೋಧನ ಐಹೊಳೆ ಮತ್ತಿತರರು ಇದ್ದರು.
ಬಾಗಲಕೋಟೆಯಲ್ಲಿ ಬುಧವಾರ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮಾತನಾಡಿದರು. ಮಾಜಿ ಸಚಿವ ಮುರುಗೇಶ ನಿರಾಣಿ, ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಶಾಸಕ ದುರ್ಯೋಧನ ಐಹೊಳೆ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಖಡಕ್ ಪ್ರಶ್ನೆ
  • ಶ್ವೇತಪತ್ರ ಹೊರಡಿಸಿ ಪುಣ್ಯಕಟ್ಟಿಕೊಳ್ಳಿ
  • ಮೋದಿ ಸರ್ಕಾರ ದೇಶವನ್ನು 4ನೇ ದೊಡ್ಡ ಆರ್ಥಿಕ ಶಕ್ತಿಯನ್ನಾಗಿಸಿದೆ
ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಸತ್ಯ ಮರೆಮಾಚದೇ ಸತ್ಯ ಹೇಳುವ ಪುಣ್ಯದ ಕೆಲಸ ಮಾಡಿ. ಐದು ಲಕ್ಷ ಕೋಟಿ ರೂ. ಸಾಲ ಮಾಡಿ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿಯಾಗಿರುವ ನೀವು ಅಷ್ಟೊಂದು ಸಾಲ ಮಾಡಿ ಕಡಿದು ಕಟ್ಟೆ ಹಾಕಿದ್ದಾದರೂ ಏನು? ಬರೀ ಕೇಂದ್ರದ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ ಪುಣ್ಯಕಟ್ಟಿಕೊಳ್ಳಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚುಚ್ಚಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಬಿಸಿಲಿನ ಪರಿಣಾಮವೋ ಅಥವಾ ಅವರಿಗೆ ಇಲ್ಲಿ ಸೋಲಿನ ಹತಾಶೆಯೋ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದ್ದಕ್ಕೆ ನನಗೆ ಜ್ಞಾನ ಇಲ್ಲವೆಂದು ಟೀಕೆ ಮಾಡುತ್ತಿದ್ದಾರೆ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದ್ದರೆ ಮಂಡ್ಯ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ 10 ತಿಂಗಳಿನಿಂದ ಪಿಂಚಣಿ ಏಕೆ ನೀಡಿಲ್ಲ? ಕುವೆಂಪು ಸೇರಿ ವಿವಿಧ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರಿಗೆ ಎರಡು ತಿಂಗಳಿನಿಂದ ಗೌರವ ಧನ ಕೊಟ್ಟಿಲ್ಲ ಏಕೆ? ಪ್ರತಿ ತಿಂಗಳು ಒಂದನೇ ತಾರೀಖಿಗೆ ಬರುತ್ತಿದ್ದ ಪೊಲೀಸ್ ಇಲಾಖೆ ಸಿಬ್ಬಂದಿಗೆ ವೇತನ ನೀಡಲು ವಿಳಂಬ ಮಾಡುತ್ತಿರುವುದೇಕೆ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು.
ಇದೆಲ್ಲವನ್ನು ಅರ್ಥ ಮಾಡಿಕೊಳ್ಳಲು ಆರ್ಥಿಕ ತಜ್ಞನೇ ಆಗಬೇಕಿಲ್ಲ. ರಾಜ್ಯದ ಆರ್ಥಿಕ ಸ್ಥಿತಿಯ ನಿಜ ಚಿತ್ರಣ ಬಿಚ್ಚಿಡುವ ಕೆಲಸ ಮಾಡಿ. ಸರ್ಕಾರ ಬಂದ ಒಂದೇ ತಿಂಗಳಿನಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದೀರಿ. ಹಣ ಇಲ್ಲದ ಕಾರಣ ಒಳಮೀಸಲಾತಿ, ನ್ಯಾಯಾಲಯದ ನೆಪ ಹೇಳಿ ಮೂರು ವರ್ಷಗಳಿಂದ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. 2.80 ಲಕ್ಷ ಹುದ್ದೆಗಳು ಖಾಲಿ ಬಿದ್ದಿರುವುದರಿಂದ ಯುವಕರು ಬೀದಿಗೆ ಬಂದು ಹೋರಾಟ ಮಾಡುವಂತಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ತುಂಗಭದ್ರಾ ಜಲಾಶಯದ ಗೇಟು ದುರಸ್ತಿಗೆ ಆಂಧ್ರಪ್ರದೇಶ ನೀಡದಿದ್ದರೂ ನಾವೇ ಹಣ ಹಾಕಿ ಗೇಟ್ ಕೂಡಿಸುತ್ತಿವೆ ಎಂದು ಹೇಳಿದ್ದರು. ಆದರೆ, ಇವರ ಯೋಗ್ಯತೆಗೆ ಆಂಧ್ರಪ್ರದೇಶ ಸರ್ಕಾರ ನೀಡಿದ್ದ ಹಣದಲ್ಲಿ 10 ಕೋಟಿಯನ್ನೂ ರಾಜ್ಯ ಸರ್ಕಾರ ಮುರಿದುಕೊಂಡಿತು. ಇದನ್ನು ಅರ್ಥ ಮಾಡಿಕೊಳ್ಳಲು ಆರ್ಥಿಕ ತಜ್ಞರೇ ಆಗಿರಬೇಕಾ? ಎಂದರು.
ಮಾತೆತ್ತಿದರೆ ಗ್ಯಾರಂಟಿ ಯೋಜನೆಗಳು ಎನ್ನುತ್ತೀರಿ. ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದ ಹಿಮಾಚಲಪ್ರದೇಶದಲ್ಲಿ ಏನಾಗಿದೆ? ಅಲ್ಲಿನ ಮುಖ್ಯಮಂತ್ರಿ, ಸರ್ಕಾರಿ ನೌಕರರಿಗೆ ವೇತನ ನೀಡಲು ಹಣವಿಲ್ಲ. ದೇವಸ್ಥಾನದ ಹುಂಡಿಯಲ್ಲಿ ಸಂಗ್ರವಾಗುವ ಹಣದಲ್ಲಿ ಶೇ. 50ರಷ್ಟು ಸರ್ಕಾರಕ್ಕೆ ನೀಡಬೇಕು ಎಂದು ಪತ್ರ ಬರೆದಿದ್ದಾರೆ. ಪಕ್ಕದ ತೆಲಂಗಾಣದ ಮುಖ್ಯಮಂತ್ರಿ ವಿಧಾನಸಭೆಯಲ್ಲಿಯೇ ಗ್ಯಾರಂಟಿ ಕಾರಣದಿಂದ ವೇತನ ಹಾಗೂ ಅಭಿವೃದ್ಧಿಗೆ ಹಣ ಕೊಡಲಾಗುತ್ತಿಲ್ಲ ಎಂದಿದ್ದಾರೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ನಮಗೆ ಮನವರಿಕೆ ಮಾಡುವುದು ಬೇಕಿಲ್ಲ. ಮೊದಲು ನಿಮ್ಮ ಪಕ್ಷದ ಶಾಸಕರಾದ ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಬಿ.ಆರ್. ಪಾಟೀಲ, ರಾಜು ಕಾಗೆ ಅವರಿಗೆ ಮನವರಿಕೆ ಮಾಡಿಕೊಡಿ ಎಂದು ವ್ಯಂಗ್ಯವಾಡಿದರು.
ಗ್ಯಾರಂಟಿಗಳ ಅಷ್ಟೊಂದು ವಿಶ್ವಾಸವಿದ್ದರೆ ಈ ಉಪ ಚುನಾವಣೆಯಲ್ಲಿ ಐದು ದಿನಗಳ ಕಾಲ ಬಾಗಲಕೋಟೆಯಲ್ಲಿ ಬಂದು ಬೀಡಾರ ಹೂಡಬೇಕಿರಲಿಲ್ಲ. ನಿಮ್ಮ ಪಟಲಾಂ ಜೊತೆ ಸೂಟ್‌ಕೇಸ್ ಸಮೀತ ಬರಬೇಕಿರಲಿಲ್ಲ ಎಂದು ಚುಚ್ಚಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾತ್ರಿ ಮಾತ್ರ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಗಲು, ರಾತ್ರಿ ಪ್ರಚಾರ ಮಾಡುತ್ತಿದ್ದಾರೆ. ಇಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕುವ ಶಕ್ತಿ ಕಾಂಗ್ರೆಸ್ಸಿಗಿಲ್ಲ ಎಂದರು.
2017ರ ನಂತರ ಜಿಎಸ್‌ಟಿ ಜಾರಿ ಮಾಡಲಾಗಿದೆ. ಆದರೆ ಮುಖ್ಯಮಂತ್ರಿ ಸದನದಲ್ಲಿ ಜಿಎಸ್‌ಟಿ ಪರಿಹಾರ ಕೊಡುವುದನ್ನು ನಮ್ಮ ಸರ್ಕಾರ ಬಂದ ಮೇಲೆ ನಿಲ್ಲಿಸಲಾಗಿದೆ ಎಂದು ಅರ್ಧ ಸತ್ಯ ಮಾತ್ರ ಹೇಳುವುದರಲ್ಲಿ ನಿಸ್ಸೀಮರಿದ್ದಾರೆ. ಹೆಚ್ಚು ತೆರಿಗೆ ಕೊಡುವ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಐದು ವಷರ್ಗಳ ಕಾಲ ಮಾತ್ರ ನೀಡಲಾಗುವುದು ಎನ್ನುವುದು ನಿಯಮಾವಳಿಯಲ್ಲಿದೆ. ಆದರೂ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವೂ ಸಾಲ ಮಾಡಿದೆ. ಆದರೆ, ಅವರು ಅದನ್ನು ಯಾವುದಕ್ಕೆ ಬಳಕೆ ಮಾಡಿದ್ದಾರೆ ಎನ್ನುವುದು ಮುಖ್ಯ. ಮೋದಿ ಸರ್ಕಾರ ದೇಶವನ್ನು ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯನ್ನಾಗಿಸಿದೆ. ಇದು ಕೇವಲ ಭಾಷಣದಿಂದ ಆಗುವುದಿಲ್ಲ ಎನ್ನುವುದನ್ನು ಮುಖ್ಯಮಂತ್ರಿ ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net