ಹದಗೆಟ್ಟ ರಸ್ತೆಗಳ ದುರಸ್ತಿ ಯಾವಾಗ?

 ರಬಕವಿ-ಬನಹಟ್ಟಿ ನಗರಸಭೆ ಮುಂಭಾಗದಲ್ಲಿ ರಸ್ತೆ ಚರಂಡಿಮಯವಾಗಿರುವುದು.
ರಬಕವಿ-ಬನಹಟ್ಟಿ ನಗರಸಭೆ ಮುಂಭಾಗದಲ್ಲಿ ರಸ್ತೆ ಚರಂಡಿಮಯವಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರ ಆಕ್ರೋಶ
  • ಕಳಪೆ ಕಾಮಗಾರಿಗೆ ಜನತೆ ಆಕ್ರೋಶ
  • ರಿಪೇರಿ ಭಾಗ್ಯ ಕಂಡರೂ ತಪ್ಪದ ಬವಣೆ
ರಬಕವಿ/ಬನಹಟ್ಟಿ : ಅವಳಿ ನಗರ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿರುವ ತಗ್ಗು-ಗುಂಡಿಗಳ ಮಧ್ಯೆ ರಸ್ತೆ ಹುಡುಕುತ್ತಾ ಚಾಲಕರು ವಾಹನ ಚಲಾಯಿಸುವಂತ ಪರಿಸ್ಥಿತಿ ಸೃಷ್ಟಿಯಾಗಿದೆ. ಇತ್ತೀಚೆಗೆ ಕೆಲವು ರಸ್ತೆಗಳು ದುರಸ್ತಿ ಭಾಗ್ಯ ಕಂಡರೂ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ಲಿನ ಮೊತ್ತ ಪಾವತಿಸುವುದಕ್ಕೂ ಮೊದಲೇ ತಗ್ಗು-ಗುಂಡಿಗಳು ಪ್ರತ್ಯಕ್ಷವಾಗಿ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.
ನಗರಸಭೆ ಮುಂಭಾಗ, ರಬಕವಿ ಶ್ರೀನಿವಾಸ ಚಿತ್ರ ಮಂದಿರ, ಬನಹಟ್ಟಿಯ ಸೋಮವಾರ ಪೇಟೆ, ಮಂಗಳವಾರ ಪೇಟೆ, ಶಂಕರಲಿಂಗ ದೇವಸ್ಥಾನ ಮುಂಭಾಗ ಹಲವಾರು ಕಡೆ ರಸ್ತೆಗಳು ಗುಂಡಿಗಳಿಂದಲೇ ತುಂಬಿವೆ. ಈ ರಸ್ತೆಗಳು ದುರಸ್ತಿ ಕಾಣದಿರುವುದರಿಂದ ನಿತ್ಯವೂ ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ರಾತ್ರಿ ಮಳೆಯಾಗುತ್ತಿದ್ದಂತೆ ರಸ್ತೆಗಳೆಲ್ಲ ನೀರಿನಿಂದ ತುಂಬಿದ ಪರಿಣಾಮ ಪಾದಚಾರಿ ರಸ್ತೆ ಹಾಗೂ ಚರಂಡಿ ಮೇಲಿನ ಜಾಗವೇ ವಾಹನಗಳ ಸಂಚಾರಕ್ಕೆ ರಸ್ತೆಯಾಗಿವೆ. ಈ ಅವ್ಯವಸ್ಥೆ ಬಗ್ಗೆ ಸಾಕಷ್ಟು ಬಾರಿ ನಗರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ರಸ್ತೆಗಳ ದುಸ್ಥಿತಿಯಿಂದ ಸಕಾಲಕ್ಕೆ ಶಾಲಾ, ಕಾಲೇಜ್‌ಗಳಿಗೆ ಹಾಗೂ ಕಚೇರಿಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ರಸ್ತೆಗಳ ಸ್ಥಿತಿ-ಗತಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಇನ್ನಾದರೂ ರಸ್ತೆಗಳ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯ.
"

ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೆ ಅವಳಿ ನಗರಕ್ಕೆ ಸಂಪರ್ಕ ಹೊಂದಿರುವ ರಸ್ತೆ ದುರಸ್ತಿ ಕಾರ್ಯವಾಗಬೇಕು.
-ಚಿದಾನಂದ ಸೊಲ್ಲಾಪೂರ, ನಾಗರಿಕರು, ರಬಕವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net