ಸಮೀರವಾಡಿ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ

 ಮುಧೋಳದ ಕಾನಿಪ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಸವಂತ ಕಾಂಬಳೆ ಮಾತನಾಡಿದರು. ರೈತ ಮುಖಂಡರಾದ ದುಂಡಪ್ಪ ಯರಗಟ್ಟಿ, ಹಣಮಂತ ನಬಾಬ, ಮಹೇಶ ಪಾಟೀಲ, ಪರಸು ಮುರನಾಳ ಇತರರಿದ್ದರು.
ಮುಧೋಳದ ಕಾನಿಪ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಸವಂತ ಕಾಂಬಳೆ ಮಾತನಾಡಿದರು. ರೈತ ಮುಖಂಡರಾದ ದುಂಡಪ್ಪ ಯರಗಟ್ಟಿ, ಹಣಮಂತ ನಬಾಬ, ಮಹೇಶ ಪಾಟೀಲ, ಪರಸು ಮುರನಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಹೇಳಿಕೆ
  • ಗೋದಾವರಿ ಕಾರ್ಖಾನೆಯವರೇ ನೇರ ಜವಾಬ್ದಾರಿ
  • ಕಬ್ಬು ತುಂಬಿದ ಟ್ರಾೃಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣ
ಮುಧೋಳ: ಕೆಲದಿನಗಳ ಹಿಂದೆ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬು ತುಂಬಿದ ಟ್ರಾೃಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಮುಧೋಳದ ರೈತ ಹೋರಾಟಗಾರರಿಗೆ ಯಾವುದೇ ಸಂಬಂಧವಿಲ್ಲ ಎಂದು ಕಬ್ಬು ಬೆಳೆಗಾರರ ಹೋರಾಟಗಾರ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಹೇಳಿದರು.
ನಗರದ ಕಾನಿಪ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಾಕಾರಣ ಪೊಲೀಸರು ನಮ್ಮ ಹೋರಾಟಗಾರರನ್ನು ಬಂಧಿಸುತ್ತಿದ್ದಾರೆ. ಇದು ಮುಂದುವರಿದರೆ ನಾವು ರಾಜ್ಯಾದ್ಯಂತ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಅಂತ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಘಟನೆಗೆ ಗೋದಾವರಿ ಸಕ್ಕರೆ ಕಾರ್ಖಾನೆಯವರೇ ನೇರ ಜವಾಬ್ದಾರಿಯಾಗಿದ್ದಾರೆ. ನಮ್ಮ ರೈತ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಈ ಕೃತ್ಯ ನಡೆದಿದ್ದು, ಈಗ ನಮ್ಮ ಮೇಲೆ ಸುಳ್ಳು ಆರೋಪ ಹೊರಿಸುವ ಕೆಲಸ ನಡೆದಿದೆ. ಕಬ್ಬು ಬೆಳೆಗಾರರ ಹೋರಾಟಗಾರರು ಇಲ್ಲಿಯವರೆಗೆ ಹಿಂಸಾತ್ಮಕ, ಬೆಂಕಿ ಹಚ್ಚುವ ಕಾರ್ಯಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ ಎಂದು ತಿಳಿಸಿದರು.
ಶಾಂತಿಯುತ ಮತ್ತು ನ್ಯಾಯಯುತ ಬೇಡಿಕೆಗಳಿಗಾಗಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬಂದಿರುವಂತಹ ಹೋರಾಟ ನಮ್ಮದು. ಸಮೀರವಾಡಿಯಲ್ಲಿ ಬೆಂಕಿ ಹಚ್ಚಿದವರನ್ನು ಪೊಲೀಸರು ಸಮಗ್ರ ತನಿಖೆಮಾಡಿ ಬಂಧಿಸಲು ನಮ್ಮದು ಯಾವುದೇ ಅಭ್ಯಂತರವಿಲ್ಲ. ತಪ್ಪು ಮಾಡಿದವರು ಯಾರೇ ಇರಲಿ, ಅವರಿಗೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರು.
ಮುಖಂಡರಾದ ದುಂಡಪ್ಪ ಯರಗಟ್ಟಿ, ಹಣಮಂತ ನಬಾಬ, ಮಹೇಶ ಪಾಟೀಲ, ಪರಸು ಮುರನಾಳ ಇತರರಿದ್ದರು.
ಮುಧೋಳ ರೈತ ಹೋರಾಟಗಾರರ ಪ್ರಯತ್ನದಿಂದ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳಿಂದ 125 ಕೋಟಿ ರೂ. ಬಾಕಿ ಹಣ ವಸೂಲಿ ಮಾಡಲಾಗಿದೆ. ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 3,300 ರೂ. ಬೆಲೆ ಕೊಡಿಸುವಲ್ಲಿ ತಮ್ಮ ಹೋರಾಟ ಯಶಸ್ವಿಯಾಗಿದ್ದು, ಕಬ್ಬು ಪೂರೈಸಿದ ರೈತರಿಗೆ 14 ದಿನಗಳೊಳಗಾಗಿ ಕಬ್ಬಿನ ಬಿಲ್ಲು ಪಾವತಿಸುವುದು. ಕಬ್ಬಿನ ತೂಕದಲ್ಲಿ ಯಾವುದೇ ರೀತಿಯ ಮೋಸಮಾಡದಂತೆ ನೋಡುವುದು. ಕಬ್ಬಿನ ರಿಕವರಿ ದರವನ್ನು ತಕ್ಷಣವೇ ರೈತರಿಗೆ ತಿಳಿಸುವ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬಸವಂತ ಕಾಂಬಳೆ ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net