ಬಾಗಲಕೋಟೆ ವಿದ್ಯಾಗಿರಿ ಪ್ರವಾಸಿ ಮಂದಿರದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಅವರನ್ನು ಮಾಜಿ ಸಚಿವ ಎಸ್.ಆರ್. ಪಾಟೀಲ ಸನ್ಮಾನಿಸಿದರು. ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಮುನೀರ, ಸಂಯೋಜಕ ಸುಧೀರ ಮುರೋಳಿ, ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಮೇಟಿ, ಆನಂದ ಜಿಗಜಿನ್ನಿ, ಶ್ರೀಧರ ನೀಲನಾಯಕ, ವಿಜಯ ಮುಳ್ಳೂರ, ಮಲ್ಲಿಕಾರ್ಜುನ ಶಿರೂರ, ವಿಜಯ ಕಮತಗಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಹೇಳಿಕೆ
ಮತದಾರರಿಂದ ಸಂಪೂರ್ಣ ಬೆಂಬಲ
ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರ ನಿರ್ಮಾಣ ಕಾರ್ಯಕ್ರಮ
ಬಾಗಲಕೋಟೆ : ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯ ಗಮನಿಸಿ ಉಪ ಚುನಾವಣೆಯಲ್ಲಿ ಬಾಗಲಕೋಟೆ ಜನತೆ ಕಾಂಗ್ರೆಸ್ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರ ನಿರ್ಮಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪಶ್ಚಿಮ ಬಂಗಾಳ, ಕೇರಳ ಹಾಗೂ ಅಸ್ಸಾಂ ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ರಾಜ್ಯದ ಎರಡು ವಿಧಾನಸಭೆ ಮತ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದರೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯಲಿದೆ ಎಂಬ ದೂರದೃಷ್ಟಿ ಬಾಗಲಕೋಟೆ ಜನತೆಯದ್ದಾಗಿದೆ ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ವತಿಯಿಂದ ಉಪ ಚುನಾವಣೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಹಯೋಗದಲ್ಲಿ ರಾಜ್ಯಮಟ್ಟದ ನಾಯಕರು ಬೇರುಮಟ್ಟದಿಂದ ತಯಾರಿ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಬಾಗಲಕೋಟೆಗೆ ನೀಡಿರುವ ವೈದ್ಯಕೀಯ ಮಹಾವಿದ್ಯಾಲಯ ದೊಡ್ಡ ಕೊಡುಗೆಯಾಗಿದೆ. ಸಂತ್ರಸ್ತರ ನೋವಿಗೆ ಸ್ಪಂದಿಸಿರುವ ಸಿಎಂ, ಯುಕೆಪಿ ಮೂರನೇ ಹಂತದ ಯೋಜನೆಗೆ 8 ಸಾವಿರ ಕೋಟಿ ರೂ. ನೀಡಿದ್ದು, ಇದರಲ್ಲಿ ಈಗಾಗಲೇ 3 ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆದಿವೆ. ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅನುದಾನದ ಕೊರತೆ ಇಲ್ಲ. ಎಲ್ಲವನ್ನೂ ಸಿಎಂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ರೂ. ನೀಡಿರುವ ಅವರು ರಾಜ್ಯದ ರೈತರಿಗೆ ವಿದ್ಯುತ್ ಪೂರೈಸಲು 18 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ವಿವಿಧ ಮಾಸಾಶನಗಳಿಗೆ 20 ಸಾವಿರ ಕೋಟಿ ರೂ. ನೀಡಿ ಜನರ ಹಿತ ಕಾಪಾಡಿದ್ದಾರೆ ಎಂದು ತಿಳಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆ ದೇಶದ ಬಡ ಜನತೆಗೆ ಉದ್ಯೋಗ ಒದಗಿಸಿತ್ತು. ಪಂಚಾಯಿತಿ ವ್ಯವಸ್ಥೆಯ ದೊಡ್ಡ ಶಕ್ತಿಯಾಗಿತ್ತು. ಅಂದಾಜು 6 ಸಾವಿರ ಕೋಟಿ ರೂ. ಗಳನ್ನು ಈ ಯೋಜನೆಗೆ ನಮ್ಮ ಸರ್ಕಾರ ಮೀಸಲಿಟ್ಟಿತ್ತು. ಕೆಲಸವಿಲ್ಲದೆ ಗೋವಾ ಹಾಗೂ ಇತರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದ ಈ ಭಾಗದ ಜನತೆಗೆ ನರೇಗಾ ಯೋಜನೆ ವರದಾನವಾಗಿತ್ತು. ಈ ಯೋಜನೆಗೆ ಕಲ್ಲು ಹಾಕುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ ಎಂದು ತಿಳಿಸಿದರು.
ಇದೆಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ 15 ಸಾವಿರ ಕೋಟಿ ರೂ. ಜಿಎಸ್‌ಟಿ ತೆರಿಗೆ ಹಣ ಬಂದಿಲ್ಲ. ಭದ್ರಾ ಯೋಜನೆಗೆ 5200 ಕೋಟಿ ರೂ. ಬಿಡುಗಡೆ ಆಗಿಲ್ಲ. ರಾಜ್ಯದ ಬಗ್ಗೆ ಕೇಂದ್ರ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಸರ್ಕಾರದ ಯಾವುದೇ ಸಹಕಾರ ಇಲ್ಲದೆ ರಾಜ್ಯದ ಆರ್ಥಿಕ ವ್ಯವಸ್ಥೆ ಸದೃಢವಾಗಿದೆ. ಕೇಂದ್ರ ಸರ್ಕಾರ 168 ಕೋಟಿ ರೂ. ಸಾಲ ಮಾಡಿದೆ. ಈ ಬಗ್ಗೆ ನಮ್ಮ ರಾಜ್ಯದ ಸಂಸದರು, ರಾಜ್ಯದ ಕೇಂದ್ರ ಸಚಿವರು ಧ್ವನಿ ಎತ್ತದಿರುವುದು ವಿಷಾದದ ಸಂಗತಿ ಎಂದು ತಿಳಿಸಿದರು.
"
ಬಾಗಲಕೋಟೆ ವಿಧಾಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ದಿವಂಗತ ಎಚ್.ವೈ. ಮೇಟಿ ಅವರು ಉತ್ತಮ ಕಾರ್ಯ ಕೈಗೊಂಡಿದ್ದಾರೆ. ವೈದ್ಯಕೀಯ ಕಾಲೇಜ್ ಅವರ ಕನಸಾಗಿತ್ತು. ಈ ಕನಸು ಸಾಕಾರಗೊಂಡಿರುವುದು ಈ ಭಾಗದ ಜನತೆಯಲ್ಲಿ ಸಂತಸ ಮೂಡಿಸಿದೆ. ಯುಕೆಪಿ ಸಂತ್ರಸ್ತರ ಮೊರೆಗೂ ರಾಜ್ಯ ಸರ್ಕಾರ ಸ್ಪಂದಿಸಿದೆ. ಇದರಿಂದ ಜನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ. -ವಿನಯಕುಮಾರ್ ಸೊರಕೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ