ಸಿದ್ಧೇಶ್ವರ ಬ್ಯಾರೇಜ್ ಮೇಲೆ ನೀರು

ಮುಧೋಳ ನಗರದ ಯಾದವಾಡ ಸೇತುವೆ ಬಳಿಯ ಸಿದ್ಧೇಶ್ವರ ಬ್ಯಾರೇಜ್ ತುಂಬಿ ಹರಿಯುತ್ತಿರುವುದು.
ಮುಧೋಳ ನಗರದ ಯಾದವಾಡ ಸೇತುವೆ ಬಳಿಯ ಸಿದ್ಧೇಶ್ವರ ಬ್ಯಾರೇಜ್ ತುಂಬಿ ಹರಿಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಘಟಪ್ರಭೆಗೆ ಜೀವಕಳೆ
  • ಮೈದುಂಬಿದ ನದಿ
  • ಜನರಲ್ಲಿ ನೆರೆಯ ಆತಂಕ
ಡಾ. ವೆಂಕಟೇಶ ಗುಡೆಪ್ಪನವರ ಮುಧೋಳ
ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಘಟಪ್ರಭಾ ನದಿ ಮೈದುಂಬಿ ಹರಿಯುತ್ತಿದೆ.
ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಮುಧೋಳ ನಗರದ ಯಾದವಾಡ ಸೇತುವೆ ಬಳಿ ಇರುವ ಸಿದ್ಧೇಶ್ವರ ಮತ್ತು ಚಿಚಖಂಡಿ ಸೇತುವೆ ಬಳಿ ಇರುವ ಬ್ಯಾರೇಜ್‌ಗಳ ಮೇಲೆ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಸದ್ಯ ನದಿಗೆ ಸುಮಾರು 13,500 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅವರಾದಿ ಬ್ಯಾರೇಜ್ ಮುಳುಗಡೆ ಹಂತಕ್ಕೆ ತಲುಪಿದೆ. ಅಽಕಾರಿಗಳು ಪರಿಸ್ಥಿತಿಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ನೀರಿನ ಒಳಹರಿವು 16,000 ಕ್ಯೂಸೆಕ್ ದಾಟಿದಲ್ಲಿ ಡವಳೇಶ್ವರ ಮತ್ತು ಮಿರ್ಜಿ ಬ್ಯಾರೇಜ್‌ಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಜಾಲೀಬೇರ, ಕೆ.ಡಿ. ಜಂಬಗಿ, ತಿಮ್ಮಾಪುರ, ಮಾಚಕನೂರು ಮತ್ತು ಆಲಗುಂಡಿ ಬಿ.ಕೆ. ಬ್ಯಾರೇಜ್‌ಗಳ ಮೇಲೂ ಅಽಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ.

ಆತಂಕ ಬೇಡ ಜಾಗೃತರಾಗಿರಿ

ಸದ್ಯದ ಮಟ್ಟಿಗೆ ಅತಿಯಾದ ಆತಂಕದ ಅಗತ್ಯವಿಲ್ಲ. ತಾಲೂಕು ಆಡಳಿತ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಭರವಸೆ ನೀಡಿದ್ದಾರೆ. ಆದಾಗ್ಯೂ, ನದಿ ತೀರದ ರೈತರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆಯಾದಾಗ ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ನದಿಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಜನರು ನಿರಂತರ ಜಾಗೃತಿಯಿಂದ ಇರಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ ಎಂದು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ತಿಳಿಸಿದ್ದಾರೆ.
"

ನದಿ ಪಾತ್ರದ ಬ್ಯಾರೇಜ್‌ಗಳ ಸ್ಥಿತಿಗತಿಯ ಮೇಲೆ ನಮ್ಮ ಇಲಾಖೆಯು ಹದ್ದಿನ ಕಣ್ಣಿಟ್ಟಿದೆ. ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾಲೀಬೇರ, ಕೆ.ಡಿ. ಜಂಬಗಿ, ತಿಮ್ಮಾಪುರ, ಮಾಚಕನೂರು ಮತ್ತು ಆಲಗುಂಡಿ ಬಿ.ಕೆ. ಬ್ಯಾರೇಜ್‌ಗಳ ಸುರಕ್ಷತೆಯ ಬಗ್ಗೆಯೂ ನಿರಂತರ ನಿಗಾ ವಹಿಸಲಾಗಿದೆ.

— | ರಾಘವೇಂದ್ರ ಕಳ್ಳಿಮನಿ, ಸಣ್ಣ ನೀರಾವರಿ ಇಲಾಖೆಯ ಎಇಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net