ದುರಂತದ ಬಗ್ಗೆ ಆಕ್ರೋಶ ಹೊರ ಹಾಕಿದ ರೈತ ಕೌಜಲಗಿ ಗ್ರಾಮದ ಸಿದ್ದಪ್ಪ ಬಿಸಗುಪ್ಪಿ, ಕಾರ್ಖಾನೆಯವರು ಮೊದಲ ಕಂತಿನಲ್ಲಿ 3,200 ರೂ. ಕೊಡುತ್ತೇವೆ ಎಂದಿದ್ದರು. ಬಳಿಕ 100 ರೂ. ಸರ್ಕಾರ ಮತ್ತು ಕಾರ್ಖಾನೆ ಸೇರಿ ಕೊಡುತ್ತೇವೆ ಎಂದಿದ್ದಕ್ಕೆ ನಾವು ಕಬ್ಬು ಕಳುಹಿಸಿದ್ದೇವೆ. ನಮ್ಮ ಕಷ್ಟ ನಮಗೆ. 2006 ರಿಂದ ಈ ಕಾರ್ಖಾನೆಗೆ ಕಬ್ಬು ಕಳುಹಿಸುತ್ತಾ ಬಂದಿದ್ದೇವೆ. ಪ್ರತಿ ವರ್ಷ 1000 ಟನ್ ಕಬ್ಬು ಕಳಿಸಿದ್ದೇವೆ. ನಮ್ಮ ಕಬ್ಬು ಸಾಗಿಸಲೆಂದು ಟ್ರಾೃಕ್ಟರ್ ಮತ್ತು ಕಬ್ಬಿನ ಗ್ಯಾಂಗ್ ತಂದಿದ್ದೇವೆ. ಇದಕ್ಕೆಲ್ಲ ಲಕ್ಷಾಂತರ ರೂ. ಖರ್ಚು ಮಾಡಿದ್ದೇವೆ. ಯಾರೋ ಬಂದು ಕ್ರಷಿಂಗ್‌ಗೆ ಅಡ್ಡಿ ಪಡಿಸುವುದು, ಇನ್ನಾೃರೋ ಬಂದೋ ಈ ರೀತಿ ಬೆಂಕಿ ಹಚ್ಚಿದರೆ ನಾವೆಲ್ಲಿಗೆ ಹೋಗಬೇಕು? ನಾವು ರೈತರೇ ಸರ್, ಕ್ರಷಿಂಗ್ ವಿಳಂಬವಾದಷ್ಟು ರೈತರಿಗೆ ಲಾಸ್ ಆಗುತ್ತದೆ ಅಲ್ಲವೆ? ನಿಗದಿತ ಅವಧಿಗೆ ಕ್ರಷಿಂಗ್ ಆಗದೇ ಇದ್ದರೆ ಇಳುವರಿ ಕಬ್ಬಿನ ಇಳುವರಿ ಕಡಿಮೆ ಆಗುತ್ತದೆ. ಸಕ್ಕರೆ ಪ್ರಮಾಣವೂ ಕುಂಟಿತವಾಗುತ್ತದೆ. ಸಮೀರವಾಡಿ ಸಕ್ಕರೆ ಕಾರ್ಖಾನೆಯವರು ನಮಗೆ ಹಿಂದಿನ ಬಾಕಿ ಕೊಟ್ಟಿದ್ದಾರೆ. ಘೋಷಿಸಿದ ಬೆಲೆಗಿಂತ ಒಮ್ಮೆಯೂ ಕಡಿಮೆ ಕೊಟ್ಟಿಲ್ಲ. ಅದಾಗ್ಯೂ ಇದೇ ಕಾರ್ಖಾನೆ ಮೇಲೆ ದಾಳಿ ನಡೆದಿದೆ ಎಂದರೆ ಇಲ್ಲಿ ಏನೋ ಕುತಂತ್ರ ಇರಲೇಬೇಕು. ಇದನ್ನು ಸುಮ್ಮನೆ ಬಿಡಬಾರದು. ಪೊಲೀಸರಿಗೆ ಗಾಯ ಮಾಡಿದ್ದಾರೆ. ಹೀಗಾಗಿ ತಪ್ಪಿತಸ್ಥರು ಯಾರೇ ಇದ್ದರೂ ಅಂತ ಕಿಡಿಗೇಡಿಗಳಿಗೆ ಶಿಕ್ಷೆ ಆಗಲೇಬೇಕು ಎನ್ನುವ ಬಿಸಗುಪ್ಪಿ ಅವರ ಆಗ್ರಹಕ್ಕೆ ಪಕ್ಕದಲ್ಲೆ ಇದ್ದ ಕಾನಟ್ಟಿ ಗ್ರಾಮದಿಂದ ಕಬ್ಬು ತಂದಿದ್ದ ರೈತ ಮಹಾಂತೇಶ ಪೂಜೇರಿ ಧ್ವನಿಗೂಡಿಸಿದರು.