ರಬಕವಿ ಬನಹಟ್ಟಿ ನಗರಸಭೆ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರ ದಿನಾಚರಣೆ ಸಮಾರಂಭಕ್ಕೆ ದಿವಾಣಿ ನ್ಯಾಯಾಧೀಶೆ ಸೌಮ್ಯ ಹೂಲಿ ಚಾಲನೆ ನೀಡಿದರು. ಎಂ.ಜಿ.ಕೆರೂರ, ರವಿ ಸಂಪಗಾವಿ, ತಹಸೀಲ್ದಾರ್ ಗಿರೀಶ ಸ್ವಾದಿ ಇತರರಿದ್ದರು.
ಭಾರತದ ಸಂವಿಧಾನದಿಂದಾಗಿ ನಮ್ಮ ದೇಶದಲ್ಲಿ ಇಲ್ಲಿಯವರೆಗೆ ರಾಜಕೀಯ ಅರಜಾಕತೆ ಉಂಟಾಗಿಲ್ಲ.
ರಬಕವಿ-ಬನಹಟ್ಟಿ: ಭಾರತದ ಸಂವಿಧಾನದಿಂದಾಗಿ ನಮ್ಮ ದೇಶದಲ್ಲಿ ಇಲ್ಲಿಯವರೆಗೆ ರಾಜಕೀಯ ಅರಜಾಕತೆ ಉಂಟಾಗಿಲ್ಲ. ಮತದಾನದ ಮೂಲಕ ನಾವು ಪ್ರತಿನಿಧಿಗಳನ್ನು ಆಯ್ಕೆ ಹಾಗೂ ತೀರಸ್ಕಾರ ಮಾಡುವ ಹಕ್ಕು ಇದೆ ಎಂದು ರಬಕವಿ ಬನಹಟ್ಟಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಸೌಮ್ಯಾ ಹೂಲಿ ಹೇಳಿದರು.
ನಗರಸಭೆಯ ಸಭಾಭವನದಲ್ಲಿ ತಾಲೂಕು ಆಡಳಿತದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ನಮ್ಮೆಲ್ಲರ ಕರ್ತವ್ಯವಾಗಿದೆ. ಯುವಕರು ತಾವು ಮತದಾನ ಮಾಡುವುದರ ಜತೆಗೆ ಇತರರು ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು. ಮತದಾನ ನಮ್ಮೆಲ್ಲರ ಪವಿತ್ರವಾದ ಹಕ್ಕು. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ದೇಶದಲ್ಲಿ ನಡೆಯುವ ಸಾರ್ವತಿಕ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸಬೇಕು. ಇದರಿಂದ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡುವುದರ ಜತೆಗೆ ಶ್ರೇಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಹಿರಿಯ ವಕೀಲ ಎಂ.ಜಿ. ಕೆರೂರ ಮಾತನಾಡಿ, ಮತದಾರರು ಚುನಾವಣೆಯ ಸಂದರ್ಭದಲ್ಲಿ ಯಾವುದೆ ಆಸೆ ಆಮೀಷಗಳಿಗೆ ಒಳಗಾಗದೆ ಮತದಾನ ಮಾಡಬೇಕು. ಮತದಾರರಿಗೆ ತಮ್ಮದೆ ಆದ ಜವಾಬ್ದಾರಿಗಳು ಇವೆ. ಮತದಾರರು ಸುಶಿಕ್ಷಿತರಾದರೆ ಮಾತ್ರ ಉತ್ತಮ ವ್ಯಕ್ತಿ ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಎಚ್.ವೈ. ಆಲಮೇಲ ಮಾತನಾಡಿದರು. ತಹಸೀಲ್ದಾರ್ ಗಿರೀಶ ಸ್ವಾದಿ, ವಿಜಯಕುಮಾರ ಕಡಕೋಳ, ವಕೀಲರ ಸಂಘದ ಕಾರ್ಯದರ್ಶಿ ರವಿ ಸಂಪಗಾವಿ, ಆರ್.ಡಿ.ಸರಿಕರ, ಎ.ಎಸ್.ಐ.ಕರಣಸಿಂಗ ರಜಪೂತ ಇದ್ದರು.