ನಿಷೇಧಾಜ್ಞೆ ಉಲ್ಲಂಘಿಸಿದರೆ ಕಾನೂನು ಕ್ರಮ...!

ಬಾಗಲಕೋಟೆ ನಗರದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಯಾರೂ ತೆರಳಬಾರದು ಎಂದು ಜಮಖಂಡಿ ನಗರದಲ್ಲಿ ಟಂಟಂನಲ್ಲಿ ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಿದ ಪೊಲೀಸರು.
ಬಾಗಲಕೋಟೆ ನಗರದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಯಾರೂ ತೆರಳಬಾರದು ಎಂದು ಜಮಖಂಡಿ ನಗರದಲ್ಲಿ ಟಂಟಂನಲ್ಲಿ ಧ್ವನಿ ವರ್ಧಕದ ಮೂಲಕ ಪ್ರಚಾರ ಮಾಡಿದ ಪೊಲೀಸರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಎಚ್ಚರಿಕೆ
  • ಬಾಗಲಕೋಟೆ ಪ್ರತಿಭಟನೆಗೆ ತೆರಳದಿರಲು ಡಂಗೂರ ಸಾರಿ ಮನವಿ
ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ಈಚೆಗೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟದ ಅಹಿತಕರ ಘಟನೆಯಿಂದಾಗಿ ನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈಗಾಗಲೇ ಬಿಎನ್‌ಎಸ್ 163 ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ.
ಈ ಮಧ್ಯೆ ಫೆ. 26ರಂದು ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಜಿಲ್ಲಾಡಳಿತಕ್ಕೆ ತಲೆಬಿಸಿ ಉಂಟಾಗಿದೆ. ಹೀಗಾಗಿ ಪ್ರತಿಭಟನೆಗೆ ಯಾವುದೇ ಕಾರಣಕ್ಕೂ ಅವಕಾಶ ಇರುವುದಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಸಿದ್ಧಾರ್ಥ ಗೋಯಲ್ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ.
ಅದಾಗ್ಯೂ ಪ್ರತಿಭಟನೆ ನಡೆಸಬಹುದು ಎನ್ನುವ ಶಂಕೆಯಲ್ಲಿ ಜಿಲ್ಲಾಡಳಿತ ಪ್ರತಿಭಟನೆಗೆ ಜನರು ಬಾರದಂತೆ ಇಡೀ ಜಿಲ್ಲಾದ್ಯಂತ ಪ್ರಚಾರ ಕಾರ್ಯ ಆರಂಭಿಸಿದೆ. ಪೊಲೀಸ್ ಇಲಾಖೆ ವತಿಯಿಂದ ಮೈಕ್ ಮೂಲಕ, ಡಂಗೂರ ಸಾರುತ್ತಿದ್ದು, ಫೆ. 26ರಂದು ಬಾಗಲಕೋಟೆ ನಗರದಲ್ಲಿ ನಿಷೇಧಾಜ್ಞೆ ಇರುವುದರಿಂದ ಯಾರೂ ಅಲ್ಲಿಗೆ ಹೋಗಬಾರದು ಎಂದು ಪ್ರಚಾರ ತೀವ್ರಗೊಳಿಸಿದೆ.

ಫೆ. 28ರವರೆಗೆ ನಿಷೇಧಾಜ್ಞೆ

ಜಿಲ್ಲಾಡಳಿತವೂ ಈ ಮೊದಲು ಫೆ. 24ರವರೆಗೆ ನಿಷೇಧಾಜ್ಞೆ ಜಾರಿಮಾಡಿ ಆದೇಶ ಹೊರಡಿಸಿತ್ತು. ಆದರೆ, ಹಿಂದೂ ಸಂಘಟನೆಗಳು ಫೆ. 26ರಂದು ಪ್ರತಿಭಟನೆಗೆ ಕರೆ ನೀಡಿವೆ. ಜತೆಗೆ ಎರಡ್ಮೂರು ದಿನಗಳಿಂದ ನಗರದಲ್ಲಿ ಅನೇಕ ಮುಖಂಡರು ಭೇಟಿ ನೀಡಿ ಪ್ರತಿಭಟನೆ ಕಾವು ಹೆಚ್ಚುವಂತೆ ಮಾಡಿದ್ದು, ಇದೀಗ ನಗರದಲ್ಲಿ ಮತ್ತೆ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದೆಂದು ನಗರದಲ್ಲಿ ನಿಷೇಧಾಜ್ಞೆಯನ್ನು ಫೆ. 28 ರವರೆಗೆ ಮುಂದುವರಿಸಿದ್ದಾರೆ. ಅಲ್ಲದೇ ನಿಯಮ ಮೀರಿ ಯಾರಾದರೂ ಪ್ರತಿಭಟನೆಯಲ್ಲಿ ವಾಹನಗಳನ್ನು ಬಳಸಿದರೆ ವಾಹನ ಸೀಜ್ ಮಾಡುವ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ನೀಡಿದೆ.

ಶಾಂತತೆ ಕಾಪಾಡಲು ಮನವಿ

ನಿಮಯ ಉಲ್ಲಂಘಿಸಿ, ನಗರದಲ್ಲಿ ಅಶಾಂತಿ ಉಂಟು ಮಾಡಿದರೆ ಅದಕ್ಕೆ ಸಂಬಂಧಿಸಿದಂತೆ ಸಂಘಟನೆಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಲಾಠಿ ಚಾರ್ಜ್ ಸಹ ಮಾಡಬಹುದಾಗಿದೆ. ಸಾರ್ವಜನಿಕರು ಸಹಕರಿಸಿ ಜಿಲ್ಲೆಯಲ್ಲಿ ಶಾಂತತೆ ಕಾಪಾಡಬೇಕು ಎಂದು ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ಮನವಿ ಮಾಡಿದೆ. ಅಲ್ಲದೇ ಜಮಖಂಡಿ ನಗರದಲ್ಲಿ ಟಂಟಂನಲ್ಲಿ ಧ್ವನಿವರ್ಧಕದ ಮೂಲಕ, ಬನಹಟ್ಟಿ ನಗರದಲ್ಲಿ ಡಂಗೂರ ಸಾರುವ ಮೂಲಕ ಯಾವುದೇ ಸಂಘಟನೆಗಳು ಹಾಗೂ ಕಾರ್ಯಕರ್ತರು ಬಾಗಲಕೋಟೆಯ ಪ್ರತಿಭಟನೆಗೆ ಹೋಗಬಾರದೆಂದು ಪ್ರಚಾರ ಮಾಡಲಾಗುತ್ತಿದೆ.

ಪ್ರಚೋದನಾತ್ಮಕ ಫೋಸ್ಟ್ ವಿರುದ್ಧ ಎಫ್ಐಆರ್

ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜ ವಿರೋಧಿ ವ್ಯಕ್ತಿಗಳು ಪ್ರಚೋದನಾತ್ಮಕ ವಿಷಯಗಳನ್ನು ಪೋಸ್ಟ್ ಮಾಡುವವರ ಮೇಲೂ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿದೆ. ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ಗಳಿಗೆ ಸಂಬಂಧಿಸಿದಂತೆ ಮೂರು ಎಫ್‌ಐಆರ್ ಹಾಗೂ 13 ಪಿಎಆರ್ ಸೇರಿ ಒಟ್ಟು 16 ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಸಹ ಗುರುತಿಸಲಾಗಿದೆ ಎಂದು ಎಸ್ಪಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.
ಬೀಳಗಿ ಠಾಣೆ ವ್ಯಾಪ್ತಿಯ ಸುನಗ ಗ್ರಾಮದ ನಿಸಾರ್ ರಾಜಪ್ಪಗೋಳ ಎನ್ನುವ ಯುವಕ ಧರ್ಮದ ವಿಷಯಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಫೋಟೋ ಸಂದೇಶವನ್ನು ಪೋಸ್ಟ್ ಮಾಡಿದ ಆರೋಪದ ಪ್ರಕರಣ ದಾಖಲಿಸಲಾಗಿದೆ. ನಾಗರಾಳ ಗ್ರಾಮದ ನಿವಾಸಿ ವೆಂಕಟೇಶ್ ಕನಕನ್ನವರ ಎನ್ನುವ ಯುವಕ ಪೊಲೀಸ್ ಇಲಾಖೆ ಬಗ್ಗೆ ಅವಹೇಳನಕಾರಿ ಕಮೆಂಟ್ ಮಾಡಿರುವ ಆರೋಪದ ಮೇಲೆ ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನಹಟ್ಟಿ ಠಾಣೆ ವ್ಯಾಪ್ತಿಯ ನಾವಲಗಿ ಗ್ರಾಮದ ನಿವಾಸಿ ಕೋಮು ಸೌಹಾರ್ದತೆಗೆ ದಕ್ಕೆ ತರುವಂತಹ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಗೆ ಪೋಸ್ಟ್ ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಗೋಯಲ್ ತಿಳಿಸಿದ್ದಾರೆ.
ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ. ಕೂಡಲೇ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಸಾಮಾಜಿಕ ಜಾಲತಾಣ ಹಾಗೂ ನೆಲಮಟ್ಟದಲ್ಲಿಯೂ ಶಾಂತಿ ಮತ್ತು ಸಮಾಧಾನ ಕಾಪಾಡಿಕೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net