ವೆಂಕಟೇಶ್ವರ ಏತ ನೀರಾವರಿ ಯೋಜನೆ ನನೆಗುದಿಗೆ

ರೈತರು ತಮ್ಮ ಜಮೀನುಗಳಲ್ಲಿರುವ ಕಾಲುವೆಗಳನ್ನು ಮುಚ್ಚಿರುವುದು.
ರೈತರು ತಮ್ಮ ಜಮೀನುಗಳಲ್ಲಿರುವ ಕಾಲುವೆಗಳನ್ನು ಮುಚ್ಚಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಗಾಗದ ವರದಾನ
  • ಕ್ಷೇತ್ರದ ನಾಯಕರೆ ಗಮನ ಹರಿಸಿ
  • ಬಾಗಲಕೋಟೆ ಜಿಲ್ಲೆಯ ಮಹತ್ತರ ನೀರಾವರಿ ಯೋಜನೆಯಲ್ಲಿ ಒಂದಾಗಿರುವ ‘ವೆಂಕಟೇಶ್ವರ ಏತ ನೀರಾವರಿ ರೈತರಿಗೆ ವರದಾನವಾಗಬೇಕಿತ್ತು
ರಬಕವಿ/ಬನಹಟ್ಟಿ: ತಾಲೂಕಿನ ವೆಂಕಟೇಶ್ವರ ಏತ ನೀರಾವರಿ ಯೋಜನೆಯು 174.42 ಕೋಟಿ ರೂ. ವೆಚ್ಚದಲ್ಲಿ 2017-18ರಲ್ಲಿ ಪ್ರಾರಂಭಗೊಂಡು ಜನವರಿ 2024ರಲ್ಲಿ ನೂರಕ್ಕೆ ನೂರರಷ್ಟು ಮುಕ್ತಾಯಗೊಂಡು ಎರಡುವರೆ ವರ್ಷಗಳೆ ಕಳೆದಿದೆ. ಇಂದಿಗೂ ಸಾವಿರಾರು ರೈತರ ಪಾಲಿಗೆ ಶಾಪವಾಗಿರುವುದು ಖೇಧಕರ ಸಂಗತಿ.
ಬಾಗಲಕೋಟೆ ಜಿಲ್ಲೆಯ ಮಹತ್ತರ ನೀರಾವರಿ ಯೋಜನೆಯಲ್ಲಿ ಒಂದಾಗಿರುವ ‘ವೆಂಕಟೇಶ್ವರ ಏತ ನೀರಾವರಿ ರೈತರಿಗೆ ವರದಾನವಾಗಬೇಕಿತ್ತು. ಇದೀಗ ರೈತರ ಕೆಂಗಣ್ಣಿಗೆ ಗುರಿಯಾಗಿ ಜಗದಾಳ-ನಾವಲಗಿ ಸುತ್ತಲಿರುವ ಮುಖ್ಯ ಹಾಗೂ ಉಪ ಕಾಲುವೆಗಳನ್ನು ಸ್ವಯಂಪ್ರೇರಿತ ರೈತರೇ ಮುಚ್ಚಿದ್ದಾರೆ.
ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯಕ್ಕೆ ಕುಲಹಳ್ಳಿ ಗ್ರಾಮದ ಕೃಷ್ಣಾ ನದಿಯಿಂದ 0.75 ಟಿಎಂಸಿಯಷ್ಟು ನೀರು ಬಳಕೆ ಮಾಡಿಕೊಂಡು ಒಟ್ಟು 17.991 ಎಕರೆ(ಸುಮಾರು 7,200 ಹೆಕ್ಟೇರ್) ಭೂಮಿಗೆ ನೀರುಣಿಸುವ ಗುರಿ ಈ ಯೋಜನೆಯದ್ದು.
ಯೋಜನೆಯ ಮುಖ್ಯ ಕಾಲುವೆ 5.05 ಕಿ.ಮೀ. ಉದ್ದವಾಗಿದ್ದು, ಇದರ ಸಿದ್ದಾಪುರ ವಲಯದ ಕಾಲುವೆ 18.85 ಕಿ.ಮೀ. ಮತ್ತು ನಾವಲಗಿ ವ್ಯಾಪ್ತಿಯಲ್ಲಿ 15.50 ಕಿ.ಮೀ. ಉದ್ದವಾಗಿದೆ.
ಕ್ಷೇತ್ರದ ಶಾಸಕರು ಈ ಯೋಜನೆಯನ್ನು ನಾನೆ ಚಾಲನೆ ನೀಡಿದ್ದೇನೆ ಎಂದು ಹೇಳುತ್ತಾ ತಿರುಗಾಡುತ್ತಾರೆ. ಮುಂದೆ ನಾನು ಶಾಸಕನಾಗಬೇಕು ಎಂದು ಹಂಬಲಿಸುವ ಸಿದ್ದು ಕೊಣ್ಣೂರ, ನಮ್ಮದೇ ಸರ್ಕಾರವಿದೆ ನಾನು ಎಲ್ಲ ಕೆಲಸಗಳನ್ನು ಮಾಡುತ್ತೇನೆ ಎನ್ನುತ್ತಿದ್ದಾರೆ. ಈ ಯೋಜನೆಯನ್ನು ನಾನು ಅಧಿಕಾರದಲ್ಲಿದ್ದಾಗ ಮಾಡಿಸಿದ್ದೇನೆ ಎಂದು ಹೇಳುವ ಮಾಜಿ ಸಚಿವೆ ಉಮಾಶ್ರೀಯವರು ಇತ್ತ ಗಮನ ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಇಲ್ಲಿನ ಅನೇಕ ರೈತರ ಅಂಬೋಣವಾಗಿದೆ.

ಕಾಲುವೆ ಮೇಲೆ ಬೆಳೆ

ರೈತರ ಜಮೀನುಗಳಿಗೆ ನೀರು ಬಾರದೆ ಮತ್ತು ಪರಿಹಾರ ಧನ ಬಾರದಿರುವುದರಿಂದ ಈ ಭಾಗದ ಬಹುತೇಕ ಕಡೆಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಹಾಯ್ದು ಹೋಗಿರುವ ಕಾಲುವೆಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಅದರ ಮೇಲೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಒಂದು ಹನಿ ನೀರಿಲ್ಲ, ಪರಿಹಾರವೂ ಇಲ್ಲ

ಕುಲಹಳ್ಳಿ, ಹುಲ್ಯಾಳ, ಮರೆಗುದ್ದಿ, ಬುದ್ನಿ, ಮಾಲಾಪುರ, ಚಿಮ್ಮಡ, ಜಗದಾಳ, ನಾವಲಗಿ ಗ್ರಾಮಗಳ ಮುಖಾಂತರ ಹಾಯ್ದು ಹೋಗುವ ಕಾಲುವೆಗೆ ಭೂಮಿ ಪಡೆದ ಸರ್ಕಾರ ಈ ಭಾಗದ ರೈತರಿಗೆ ಇದುವರೆಗೆ ಪರಿಹಾರ ಧನ ನೀಡಿಲ್ಲ. ಕಾಲುವೆಗೆ ಇದುವರೆಗೂ ಹನಿ ನೀರೂ ಬಂದಿಲ್ಲ ಎಂದು ಈ ಭಾಗದ ರೈತರು ಹೇಳಿದ್ದಾರೆ.
"

ಜಮೀನುಗಳಲ್ಲಿ ಕಾಲುವೆ ಹಾಯ್ದು ಹೋದರೂ ಹನಿ ನೀರೂ ಬಂದಿಲ್ಲ. ಪರಿಹಾರ ಒದಗಿಸಿ ನೀರು ಬರುವಂತೆ ಮಾಡಬೇಕಾದ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು. ಅಲ್ಲಿಯವರೆಗೂ ಕಾಲುವೆ ಮೇಲೆ ಬೇಸಾಯ ನಡೆಸುವುದು ಎಲ್ಲ ರೈತರದ್ದಾಗಿದೆ.
-ಮಲ್ಲಿಕಾರ್ಜುನ ಜನವಾಡ, ರೈತ, ನಾವಲಗಿ.

"

ಪರಿಹಾರಕ್ಕಾಗಿ ಇಲಾಖೆಗಳಿಗೆ ಅಲೆದು ಸಾಕಾಗಿದೆ. ಎಷ್ಟೇ ವಿನಂತಿಸಿಕೊಂಡರೂ ಪ್ರಯೋಜನವಾಗಿಲ್ಲ. ಕೇಳಿದಾಗೊಮ್ಮೆ ಭರವಸೆಗಳೇ ಬೇಸರವಾಗಿವೆ.
-ಶಿವು ಭದ್ರನ್ನವರ, ರೈತ, ಬನಹಟ್ಟಿ.

"

ಸಂಪೂರ್ಣ ಭೂಸ್ವಾಧಿನವಾಗಿಲ್ಲ. ಕೆಲ ರೈತರು ಸಹಕರಿಸಿದ್ದು, ಇನ್ನಷ್ಟು ರೈತರ ಸಹಕರಿಸಬೇಕಿದೆ. ಮೂರ‌್ನಾಲ್ಕು ತಿಂಗಳಲ್ಲಿ ಪರಿಹಾರ ಒದಗಿಸುವ ಕಾರ್ಯ ನಡೆಯಲಿದೆ.
-ಪ್ರದೀಪ ಪಾಟೀಲ, ಸಹಾಯಕ ಅಭಿಯಂತರ, ನೀರಾವರಿ ಇಲಾಖೆ, ಜಮಖಂಡಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net