ಪಟ್ಟಣದ ಅಕ್ಕಮಹಾದೇವಿ ಅನುಭಾವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ವೀರಣ್ಣ ಆಲೂರಹಿರೇಮಠ, ಕೆ.ಎಸ್.ಕೆರೂರ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಶಿವುಕುಮಾರ ಅಂಗಡಿ ಹೇಳಿಕೆ
ಮನೆ ಮಾರಿ ಮುದ್ರಣಾಲಯ ಸ್ಥಾಪಿಸಿದ ಮಹಾನುಭಾವ
ಡಾ.ಫ.ಗು.ಹಳಕಟ್ಟಿ ಅವರ ಜಯಂತಿ
ಬಾದಾಮಿ: ಕನ್ನಡದ ಶ್ರೇಷ್ಠ ಸಂಶೋಧಕರು, ಸಾಹಿತಿ, ವಕೀಲರು ಮತ್ತು ಪ್ರಕಾಶಕರಾಗಿದ್ದ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿಯವರು 12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವನ್ನು ಮನೆ ಮನೆಗೆ ಹೋಗಿ ಸಂಗ್ರಹಿಸಿ, ಸಂರಕ್ಷಿಸಿ ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಎಸ್‌ಬಿಎಂ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಶಿವಕುಮಾರ್ ಅಂಗಡಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಅನುಭಾವ ಮಂಟಪದಲ್ಲಿ ಅಕ್ಕನ ಬಳಗ, ಪ್ರವಚನ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಅವರ ಜಯಂತಿ ನೆನಪಿನಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಅಂದಿನ ಕಾಲದಲ್ಲಿ ಮರೆತು ಹೋಗಿದ್ದ ಮತ್ತು ಧೂಳು ಹಿಡಿದಿದ್ದ ಶರಣರ ವಚನಗಳ ತಾಳೆಗರಿ ಹಾಗೂ ಹಸ್ತಪ್ರತಿಗಳನ್ನು ಹುಡುಕಲು ಹಳ್ಳಿ ಹಳ್ಳಿಗೆ ಸೈಕಲ್ ಮೇಲೆ ಸುತ್ತಿ ಮನೆ-ಮನೆಗಳಿಂದ ಸಂಗ್ರಹಿಸಿದರು. ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ಹಣದ ಕೊರತೆಯಾದಾಗ ತಮ್ಮ ಸ್ವಂತ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿದ ಮಹಾನುಭಾವರು ಎಂದು ತಿಳಿಸಿದರು.
ಭಕ್ತರ ಮನೆಯ ಜಗಲಿ ಮೇಲೆ ಇಟ್ಟು ಪೂಜಿಸುವ ತಾಳೆಗರಿ ವಚನಗಳನ್ನು ಸಂಗ್ರಹಿಸಿ ಮುದ್ರಣ ಮಾಡಿ ಮುಂದಿನ ಪೀಳಿಗೆಗೆ ಕೊಡಮಾಡುವ ಹಂಬಲದಿಂದ ವಕೀಲ ವೃತ್ತಿ ಜತೆಗೆ ಈ ಪ್ರವೃತ್ತಿ ಆರಂಭಿಸಿದ್ದರಿಂದ ನಮಗೆಲ್ಲ ಶರಣರ ವಚನಗಳನ್ನು ಓದಲು ಸಾಧ್ಯವಾಗಿದೆ ಎಂದರು.