ಮುಧೋಳ: ತಾಲೂಕಿನ ಶೈಕ್ಷಣಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಲೂಕಿನ ಶಿರೋಳ ಮತ್ತು ಉತ್ತೂರ ಸರ್ಕಾರಿ ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ವಿಶೇಷ ಆಸಕ್ತಿಯಿಂದಾಗಿ ಅವರ ಸ್ವಗ್ರಾಮ ಉತ್ತೂರಿನ ಗ್ರಾಮಸ್ಥರ ದಶಕಗಳ ಬೇಡಿಕೆ ಈಡೇರಿದಂತಾಗಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಮತ್ತು ಹೆಣ್ಣು ಮಕ್ಕಳಿಗೆ ತಮ್ಮೂರಿನಲ್ಲಿಯೇ ಪಿಯು ಶಿಕ್ಷಣ ಪಡೆಯುವ ಸುವರ್ಣ ಅವಕಾಶ ಲಭಿಸಿದೆ.
ಈ ಹಿಂದೆ ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ದೂರದ ನಗರಗಳಿಗೆ ಅಲೆಯುತ್ತಿದ್ದ ಅಥವಾ ಆರ್ಥಿಕ ಕಾರಣದಿಂದ ಶಿಕ್ಷಣ ಮೊಟಕುಗೊಳಿಸುತ್ತಿದ್ದ ಮಲ್ಲಾಪುರ, ಮಿರ್ಜಿ, ಚನ್ನಾಳ, ರಂಜಣಗಿ, ಜಾಲಿಬೇರ ಸೇರಿ ಸುತ್ತಮುತ್ತಲಿನ ಹಳ್ಳಿಗಳ ಪ್ರತಿಭೆಗಳಿಗೆ ಈ ನಿರ್ಧಾರವು ವರದಾನವಾಗಿ ಪರಿಣಮಿಸಿದೆ. ಸಚಿವರ ಈ ಶೈಕ್ಷಣಿಕ ಕೊಡುಗೆಯಿಂದಾಗಿ ಗ್ರಾಮಗಳಲ್ಲಿ ಶೈಕ್ಷಣಿಕ ಕ್ರಾಂತಿಗೆ ಅಡಿಪಾಯ ಬಿದ್ದಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
2026-27ನೇ ಶೈಕ್ಷಣಿಕ ಸಾಲಿನಿಂದಲೇ ನೂತನ ಕಾಲೇಜ್‌ಗಳು ಕಾರ್ಯಾರಂಭ ಮಾಡಲಿದ್ದು, ಸದ್ಯಕ್ಕೆ ವಾಣಿಜ್ಯ ವಿಭಾಗದ ಬೋಧನೆಗೆ ಅನುಮತಿ ನೀಡಲಾಗಿದೆ. ಇಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೊಂದಿಗೆ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಮತ್ತು ಗಣಕ ವಿಜ್ಞಾನದಂತಹ ಪ್ರಮುಖ ವಿಷಯಗಳನ್ನು ಬೋಽಸಲು ಸಿದ್ಧತೆ ನಡೆಸಲಾಗಿದೆ.
ನೂತನ ಕಾಲೇಜ್‌ಗಳಿಗೆ ಅನುಭವಿ ಉಪನ್ಯಾಸಕರನ್ನು ನಿಯೋಜಿಸಲು ಸರ್ಕಾರ ಈಗಾಗಲೇ ಸೂಚನೆ ನೀಡಿದ್ದು, ಒಂದೇ ಸೂರಿನಡಿ ಪ್ರೌಢಶಾಲೆ ಮತ್ತು ಪಿಯು ಶಿಕ್ಷಣ ಲಭ್ಯವಾಗುತ್ತಿರುವುದು ಪಾಲಕರಲ್ಲಿ ಸಂತಸ ಮೂಡಿಸಿದೆ.