ಬಾಗಲಕೋಟೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ಪ್ರಚಾರ ಮಾಡಲು ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಯತೀಂದ್ರ ಅವರು ಸೋಮವಾರ ಬೆಳಗ್ಗೆ ಬಾದಾಮಿಯ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಜಿ.ಪಂ. ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಸೇರಿ ಕಾಂಗ್ರೆಸ್ ಮುಖಂಡರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಐಹೊಳೆ ಜಿ.ಪಂ. ವ್ಯಾಪ್ತಿಯಲ್ಲಿ ಯತೀಂದ್ರ ಮತಯಾಚನೆ
ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ
ಬಾಗಲಕೋಟೆ: ಬಾಗಲಕೋಟೆ ಉಪ ಚುನಾವಣೆಯಲ್ಲಿ ದಿ. ಎಚ್.ವೈ. ಮೇಟಿ ಅವರ ಪುತ್ರ ಉಮೇಶ ಮೇಟಿ ಅವರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲ ಪಡಿಸುವಂತೆ ವಿಧಾನ ಪರಿಷತ್ ಸದಸ್ಯ ಯತೀಂದ್ರ ಮತದಾರರಿಗೆ ಮನವಿ ಮಾಡಿದರು.
ಕ್ಷೇತ್ರದ ಐಹೊಳೆ ಜಿ.ಪಂ. ವ್ಯಾಪ್ತಿಯ ನಿಂಬಲಗುಂದಿ, ಬಿಸನಾಳ, ರಾಮಥಾಳ, ಕಳ್ಳಿಗುಡ್ಡ, ಹೂವಿನಹಳ್ಳಿ, ಮಾದಾಪುರ ಸೇರಿ ವಿವಿಧೆಡೆ ಮಿಂಚಿನ ಮತಯಾಚನೆ ನಡೆಸಿದರು.
ಎಚ್.ವೈ. ಮೇಟಿ ಅವರು ನಮ್ಮ ಕುಟುಂಬಕ್ಕೆ ಆಪ್ತರಾಗಿದ್ದವರು. ಅವರನ್ನು ಕಳೆದುಕೊಂಡು ನಮ್ಮ ಕುಟುಂಬವೂ ವೈಯಕ್ತಿಕವಾಗಿ ನಷ್ಟ ಅನುಭವಿಸಿದೆ. ಹೀಗಾಗಿ ಆ ಕುಟುಂಬದ ಉಮೇಶ ಮೇಟಿ ಅವರನ್ನು ಗೆಲ್ಲಿಸುವ ಮೂಲಕ ಈ ಕ್ಷೇತ್ರದ ಅಭಿವೃದ್ಧಿಗೆ ಮತದಾರರು ಕೈಜೋಡಿಸಬೇಕು ಎಂದರು.
ನಮ್ಮ ಕಾಂಗ್ರೆಸ್ ಸರ್ಕಾರ ಬಡವರನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದೆ. ಇದರಿಂದ ಸ್ವಾಭಿಮಾನದ ಬದುಕು ಸಾಗಿಸಲು ಎಲ್ಲರಿಗೂ ಅನುಕೂಲವಾಗಿದೆ. ಈ ಕ್ಷೇತ್ರದಲ್ಲಿ ದಿ. ಎಚ್.ವೈ. ಮೇಟಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವುಗಳನ್ನು ಮುಂದುವರಿಸಲು ಉಮೇಶ ಮೇಟಿ ಗೆಲುವು ಅಗತ್ಯ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಅದು ನಾವು ಗೆದ್ದಂತೆ. ಏ. ೭ರವರೆಗೂ ಕ್ಷೇತ್ರದಲ್ಲಿ ಇದ್ದುಕೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವ ತತ್ವ ಪಾಲನೆ ಮಾಡುತ್ತಾರೆ. ಅದೇ ದಾರಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿಗಳು ಜಾತಿ, ಮತ ಎನ್ನದೇ ಎಲ್ಲ ವರ್ಗದವರಿಗೆ ನೀಡಿದ್ದು, ಇದರಿಂದ ಮಹಿಳೆಯರು ಹೆಚ್ಚೆಚ್ಚು ಸಬಲರಾಗಲು ಸಹಕಾರಿಯಾಗಿವೆ. ಇದೇ ಕಾರಣಕ್ಕೆ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.