ಯುಕೆಪಿ ಬಹಿರಂಗ ಚರ್ಚೆಗೆ ಸಚಿವ ತಿಮ್ಮಾಪೂರಗೆ ಆಹ್ವಾನ

ಸಂಸದ ಗೋವಿಂದ ಕಾರಜೋಳ
ಸಂಸದ ಗೋವಿಂದ ಕಾರಜೋಳ
Published on

ಪ್ರಮುಖ ಮುಖ್ಯಾಂಶಗಳು

  • ಯುಕೆಪಿಗೆ ಯಾವ ಪಕ್ಷದಿಂದ ಏನೇನು ಕೊಡುಗೆ?
  • ಉತ್ತರ ಕರ್ನಾಟಕದಿಂದ ಜಲಸಂಪನ್ಮೂಲ ಇಲಾಖೆ ನಿರ್ವಹಿಸಿದ ಎಲ್ಲ ಸಚಿವರೂ ಬರಲಿ
  • 1956 ರಿಂದ 2026ರ ಮಾರ್ಚ್ ವರೆಗೂ ದಾಖಲಾತಿ ಸಮೇತ ಬರಲಿ
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ವಿಚಾರವಾಗಿ 1956 ರಿಂದ 2026ರ ಮಾರ್ಚ್ ಅಂತ್ಯದ ವರೆಗೆ ಯಾವ ಯಾವ ಪಕ್ಷಗಳ ಸರ್ಕಾರಗಳು ಏನೇನು ಮಾಡಿವೆ? ಎಂದು ಬರೀ ಟೀಕೆ ಟಿಪ್ಪಣಿ ಮಾಡುವುದನ್ನು ಬಿಟ್ಟು ಅವರಿಗೆ ತಾಕತ್ತು ಇದ್ದರೆ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಬರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರಿಗೆ ಜಲ ಸಂಪನ್ಮೂಲ ಇಲಾಖೆ ಮಾಜಿ ಸಚಿವ, ಸಂಸದ ಗೋವಿಂದ ಕಾರಜೋಳ ಪಂಥಾಹ್ವಾನ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1964ರ ಮೇ ತಿಂಗಳಲ್ಲಿ ಲಾಲಬಹದ್ದೂರ ಶಾಸ್ತ್ರಿ ಅವರು ಆಲಮಟ್ಟಿ ಜಲಾಶಯಕ್ಕೆ ಅಡಿಗಲ್ಲು ಹಾಕಿದ ಬಳಿಕ ಈ ವರೆಗೆ ಏನೇನಾಗಿದೆ? ಯಾರ ಕೊಡುಗೆ ಎಷ್ಟಿದೆ? ಯಾವ ಸರ್ಕಾರಗಳು ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನೆಗಳೇನು? ಅಧಿಕಾರ ಸಿಕ್ಕ ಬಳಿಕ ಮಾಡಿದ ಹಾಗೂ ನೀಡಿದ ಅನುದಾನ ಎಷ್ಟೆಷ್ಟು? ಎನ್ನುವುದನ್ನು ದಾಖಲೆಗಳ ಸಮೇತ ಚರ್ಚೆ ನಡೆದು ಹೋಗಲಿ. ಜನರಿಗೆ ಒಮ್ಮೆ ಸತ್ಯ ಗೊತ್ತಾಗಲಿ ಎಂದು ಕಾರಜೋಳ ಅವರು ಕಾಂಗ್ರೆಸ್‌ನ ತಿಮ್ಮಾಪೂರ ಅವರಿಗೆ ವೀಳ್ಯಾ ನೀಡಿದರು.
ದೇವೇಗೌಡರು ಮುಖ್ಯಮಂತ್ರಿ ಇದ್ದಾಗ ರೈತರ ಜಮೀನಿಗೆ ನೀರು ಹರಿಯಿತು. ಜೆ.ಎಚ್. ಪಟೇಲರು ಸಿಎಂ ಆಗಿದ್ದಾಗ ರೈತರಿಗೆ ಪರಿಹಾರ ಮೊತ್ತ ಹೆಚ್ಚಿಗೆ ಮಾಡಿದರು. ಅಂದು ನೀರಾವರಿ ಸಚಿವರಾಗಿದ್ದ ನಾಗೇಗೌಡರು ಬಾಯಿತಪ್ಪಿ ನೀಡಿದ ಒಂದು ಹೇಳಿಕೆಯಿಂದ ಆಂಧ್ರ ಸರ್ಕಾರ ಕೋರ್ಟ್‌ಗೆ ಹೋಗಿದ್ದರಿಂದ ಜಲಾಶಯದ ಗೇಟ್‌ನ್ನು 519.60 ಮೀಟರ್‌ಗೆ ಕತ್ತರಿಸಬೇಕಾಯಿತು. ಇದು ಸತ್ಯ. 519 ಮೀಟರ್‌ಗೆ ನೀರು ನಿಲ್ಲಿಸಿದಾಗ ಈ ತಿಮ್ಮಾಪೂರ ಎಲ್ಲಿದ್ರು? ಸುಮ್ಮನೆ ಏನೇನೋ ಹೇಳುವುದಲ್ಲ ಎಂದರು.
ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಆಯಿತಲ್ಲ. ಏನೇನು ಕೊಟ್ಟಿದ್ದಾರೆ? 2025-26ನೇ ಸಾಲಿನಲ್ಲಿ ಕೃಷ್ಣಾಗೆ ಇಟ್ಟಿದ್ದ ಮೂರು ಸಾವಿರ ಕೋಟಿ ರೂ. ಗಳನ್ನು ಮಾರ್ಚ್ ಅಂತ್ಯ ಬಂದರೂ ಕೊಟ್ಟಿಲ್ಲ. ಈಗ ಉಪ ಚುನಾವಣೆ ಘೋಷಣೆ ಹಿಂದಿನ ದಿನ ಬಂದು ಗಿಮಿಕ್ ಮಾಡಿದರೆ ಆಗುತ್ತಾ?
ಅಷ್ಟೊಂದು ಕಾಳಜಿ ಇದ್ದರೆ ಜಮೀನು ಕಳೆದುಕೊಂಡವರಿಗೆ ಹಾಗೂ ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಹೋದವರಿಗೆ ಸದ್ಯ 25 ಸಾವಿರ ಕೋಟಿ ರೂ. ಕೊಡಬೇಕು. ಅವರು ಪಡೆಯಲು ಸಿದ್ಧರಿದ್ದಾರೆ. ಆ ದುಡ್ಡನ್ನು ಕೊಡಿಸಲಿ ನೋಡೋಣ. ಚರ್ಚೆಗೆ ಜಲ ಸಂಪನ್ಮೂಲ ಖಾತೆ ನಿರ್ವಹಿಸಿರುವ ಎಂ.ಬಿ. ಪಾಟೀಲ, ಎಚ್.ಕೆ. ಪಾಟೀಲ ಸೇರಿ ಎಲ್ಲರೂ ಬರಲಿ. ನಾನು ಬರುತ್ತೇನೆ. ಚರ್ಚೆಯ ಅಧ್ಯಕ್ಷತೆಯನ್ನು ಎಚ್.ಕೆ. ಪಾಟೀಲರೇ ವಹಿಸಿ, ಕೊನೆಗೆ ತೀರ್ಮಾನ ನೀಡಲಿ ಎಂದು ‘ಸವಾಲ್’ ಎಸೆದರು.

ಒಳಮೀಸಲಾತಿ ತಿಮ್ಮಾಪೂರಗೆ ಮೂರು ಪ್ರಶ್ನೆ

ರಾಜ್ಯದಲ್ಲಿ ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಪ್ರಮಾಣವನ್ನು ನಮ್ಮ ಬಿಜೆಪಿ ಸರ್ಕಾರ ಹೆಚ್ಚಿಗೆ ಮಾಡಿತ್ತು. ನಾಗಮೋಹನದಾಸ ಸಮಿತಿ ವರದಿ ಸ್ವೀಕಾರಮಾಡಿ ಸರ್ವಪಕ್ಷಗಳ ಸಭೆ ಕರೆದು ಒಪ್ಪಿಗೆ ಪಡೆದು, ಎರಡೂ ಸದನಗಳಲ್ಲಿ ಬೆಂಬಲ ಪಡೆದುಕೊಂಡು ರಾಜ್ಯಪಾಲರಿಂದ ಅನುಮೋದನೆಯಾಗಿ ಕಾಯ್ದೆ ಮಾಡಿದ್ದೇವು. ಶೇ. 18 ರಿಂದ 24ಕ್ಕೆ ಹೆಚ್ಚಿಸಿ ಅದರಂತೆ ಮೆಡಿಕಲ್ ಸೀಟು ಸೇರಿ ಶೈಕ್ಷಣಿಕವಾಗಿ ಮೀಸಲಾತಿ ಹಂಚಿಕೆ ಮಾಡಿದ್ದೇವು. ಅದನ್ನು ಕಾಂಗ್ರೆಸ್ ಸರ್ಕಾರ ಸಹ ಮುಂದುವರಿಸಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯನ್ನು ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ಭಾವಿಸಿ ತಮಗೆ ಬೇಕಾದಂತೆ ಹಂಚಿಕೆಮಾಡಿ ಗೊಂದಲ ಸೃಷ್ಟಿಸಿದ್ದು ಏಕೆ?
101 ಜಾತಿಗಳಿಗೂ ನ್ಯಾಯ ಸಮ್ಮತ ತೀರ್ಮಾನ ಆಗಬೇಕು ಎನ್ನುವ ನಮ್ಮ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಲ್ಲದೇ ತಮ್ಮದೇ ಶಿಷ್ಯರನ್ನು ಕೋರ್ಟ್‌ಗೆ ಕಳುಹಿಸಿ ಗೊಂದಲ ಮಾಡಿಸಿದ್ದೇಕೆ? ಎಂದು ಪ್ರಶ್ನಿಸಿದರು.
ಮೀಸಲಾತಿ ಹೆಚ್ಚಿಸಿರುವ ಬಗ್ಗೆ ರಾಜ್ಯದ ಯಾವ ಬ್ರಾಹ್ಮಣ, ಲಿಂಗಾಯರು ಸೇರಿ ಬೇರೆ ಸಮುದಾಯದವರು ಕೋರ್ಟ್‌ಗೆ ಹೋಗಿಲ್ಲ. ಎಡ ಮತ್ತು ಬಲ ಸಮಯದಾಯದವರು ಹೋಗಿದ್ದು? ಹೋದವರು ಯಾರು? ಹೋಗಿದ್ದಾದರೂ ಏಕೆ? ಎಸ್ಸಿಯಲ್ಲಿ ಇದ್ದ ಕೆಲ ಸಮುದಾಯಗಳನ್ನು ಕೈಬಿಡುವಂತೆ ಹೋಗಿದ್ದಾರೆ. ಅದಲ್ಲದೇ ಕೋರ್ಟ್‌ಗೆ ಎರಡು ಸಲ ಮುದ್ದತ್ತಿಗೆ ಸರ್ಕಾರ ಹಾಜರಾಗಲಿಲ್ಲ ಏಕೆ ಎಂದು ಪ್ರಶ್ನೆಗಳ ಸುರಿಮಳೆ ಗೈದು, ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಅಲೆಮಾರಿ ಜನಾಂಗಕ್ಕೆ ಮಹಾದ್ರೋಹ ಮಾಡಿದ್ದು, ದಲಿತರ ವಿರೋಧಿ ಸರ್ಕಾರ ಎಂದು ಜರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net