ಬಾದಾಮಿ ನಗರದಲ್ಲಿ ಶನಿವಾರ ರೈತ ಮುಖಂಡ ಶರಣಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಮುತ್ತಣ್ಣಗೌಡ ರೋಣದ, ಯಲ್ಲಪ್ಪ ಪಾತ್ರೋಟಿ, ಅಶೋಕ ಗಂಗಾಲ, ಮಾರುತಿ ಬೆಳ್ಳಿಗುಂಡಿ ಇದ್ದರು.
ಬಾಣಾಪೂರ- ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ 367 ಕಾಮಗಾರಿ ಅವೈಜ್ಞಾನಿಕ
ಬಾದಾಮಿ: ಬಾಣಾಪೂರ- ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ 367 ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜೊತೆಗೆ ರೈತಾಪಿ ವರ್ಗದವರಿಗೆ ಅನ್ಯಾಯವಾಗುತ್ತಿದೆ ಎಂದು ರೈತ ಮುಖಂಡ ಶರಣಗೌಡ ಪಾಟೀಲ ಆಕ್ರೋಶ ಹೊರ ಹಾಕಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆದ್ದಾರಿ ನಿರ್ಮಾಣ ಅವೈಜ್ಞಾನಿಕವಾಗಿ ನಡೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು, ಸಂಸದರು ಗಮನ ಹರಿಸುತ್ತಿಲ್ಲ. ಮನವಿ ಮಾಡಿದರು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆದ್ದಾರಿಯನ್ನು 6-7 ಎತ್ತರ ಏರಿಸಲಾಗಿದೆ. ಇದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ರಸ್ತೆಗೆ ತರಲು ಸಾಧ್ಯವಾಗುತ್ತಿಲ್ಲ. ಇದೀಗ ಕಬ್ಬು ಕಟಾವಿಗೆ ಬಂದಿದ್ದು, ಈ ರಸ್ತೆಯ ಅವ್ಯವಸ್ಥೆಯಿಂದ ಕಬ್ಬು ಬೆಳೆಯು ಜಮೀನಿನಲ್ಲಿ ಒಣಗಿ ಹೋಗುವ ಪರಿಸ್ಥಿತಿ ಬಂದಿದೆ ಎಂದು ದೂರಿದರು.
ತಗ್ಗು ಪ್ರದೇಶದಲ್ಲಿರುವ ರೈತರ ಜಮೀನುಗಳಿಗೆ ನೆರವಾಗುವ ನಿಟ್ಟಿನಲ್ಲಿ ಪರಾಯ (ಸರ್ವಿಸ್) ರಸ್ತೆ ನಿರ್ಮಿಸಬೇಕಾಗಿತ್ತು. ಸರ್ವೀಸ್ ರಸ್ತೆ ಮೂಲಕ ತಮ್ಮ ಫಸಲು ತರಲು ರೈತರಿಗೆ ಅನುಕೂಲವಾಗುತ್ತಿತ್ತು, ಆದರೆ ಇದ್ಯಾವುದು ಮಾಡುತ್ತಿಲ್ಲ ಎಂದು ದೂರಿದರು.
ಬಾದಾಮಿ ತಾಲೂಕಿನ ಮಲಪ್ರಭಾ ನದಿ ದಂಡೆಯಲ್ಲಿರುವ 20ಕ್ಕೂ ಅಧಿಕ ಗ್ರಾಮಗಳು ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗುತ್ತಿವೆ. ಅನ್ನದಾತರು ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ನದಿಗೆ ಅಡ್ಡಲಾಗಿ ನಿರ್ಮಿಸುವ ಸೇತುವೆ, ಬ್ಯಾರೇಜ್‌ಗಳ ಎತ್ತರ ಹೆಚ್ಚಿಸಬೇಕು ಎಂದರು.
ಮುಖಂಡರಾದ ಮುತ್ತಣ್ಣಗೌಡ ರೋಣದ, ಯಲ್ಲಪ್ಪ ಪಾತ್ರೋಟಿ, ಅಶೋಕ ಗಂಗಾಲ, ಮಾರುತಿ ಬೆಳ್ಳಿಗುಂಡಿ ಇದ್ದರು.