

ಬಾಗಲಕೋಟೆ: ಪುಸ್ತಕದಲ್ಲಿ ವಿಷಯ, ಭಾಷೆ, ಶೈಲಿ ಹಾಗೂ ಓದುಗರ ಮೇಲೆ ಪ್ರಭಾವ ಬೀರುವ ಶಕ್ತಿ ಇರಬೇಕು. ಜ್ಞಾನದ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಲೋಕದ ಸುತ್ತಾಟ ಅಗತ್ಯ ಎಂದು ಸಾಹಿತಿ ಜಿ.ಕೆ.ತಳವಾರ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಕಾಲೇಜಿನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ದಸರಾ ಕವಿಗೋಷ್ಠಿಯಲ್ಲಿ ಸಾಹಿತಿ ಡಾ.ಪ್ರಕಾಶ ಖಾಡೆ ಅವರ `ಲೋಕದ ಸುತ್ತಾಟ' ಲಂಡನ್ ಪ್ರವಾಸ ಕಥನ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಾಹಿತ್ಯದಲ್ಲಿ ಜೀವಂತಿಕೆ ಇರಬೇಕು. ಬಾಗಲಕೋಟೆ ನಗರದ ಮಹತ್ವ ಅರಿಯಲು ಅದರ ಇತಿಹಾಸ, ಜನರ ಬದುಕು, ವ್ಯವಹಾರ, ಕೃಷಿ, ಉದ್ಯೋಗ, ಸಂಸ್ಕೃತಿ, ಕಲೆ ಹಾಗೂ ಜಾನಪದದ ಕುರಿತು ತಿಳಿದುಕೊಳ್ಳಬೇಕು. ಇವೆಲ್ಲವನ್ನೂ ಸ್ವತಃ ಅನುಭವಿಸಿದಾಗ ಅವುಗಳ ನೈಜ ಮೌಲ್ಯ ಅರಿವಾಗುತ್ತದೆ. ಇಂತಹ ಅನುಭವಗಳ ಅನುಸಂಧಾನವೇ ಪ್ರವಾಸ ಸಾಹಿತ್ಯದ ವಿಶೇಷತೆ ಎಂದು ಹೇಳಿದರು.
ಪ್ರಭಾರಿ ಪ್ರಾಚಾರ್ಯ ವಿ.ಜಿ. ಜಡಿಮಠ ಮಾತನಾಡಿ, ದಸರಾ ಕವಿಗೋಷ್ಠಿ ಯುವ ಸಾಹಿತಿಗಳಿಗೆ ಉತ್ತಮ ವೇದಿಕೆಯಾಗಲಿ. ಶಾಲಾ-ಕಾಲೇಜುಗಳಲ್ಲಿ ವಿವಿಧ ವಿಷಯಗಳ ಕುರಿತು ಕವಿಗೋಷ್ಠಿಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಬೇಕು ಎಂದರು.
ಕೃತಿಕಾರ ಡಾ. ಪ್ರಕಾಶ ಖಾಡೆ ಮಾತನಾಡಿ, ಬದುಕನ್ನು ಅರಿಯಲು ಪುಸ್ತಕಗಳನ್ನು ಓದಬೇಕು. ಬದುಕಿನ ವೈವಿಧ್ಯವನ್ನು ಕಣ್ಣಾರೆ ಕಾಣಲು ದೇಶ-ವಿದೇಶಗಳನ್ನು ಸುತ್ತಬೇಕು. ಓದು ಜ್ಞಾನವನ್ನು ವಿಸ್ತರಿಸಿದರೆ, ಪ್ರವಾಸ ಅನುಭವದ ಪರಿಽಯನ್ನು ವಿಸ್ತರಿಸುತ್ತದೆ. ಪ್ರವಾಸವೆಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ ಬರುವುದಷ್ಟೆ ಅಲ್ಲ, ಜಗತ್ತನ್ನು ಅರಿಯುವ, ಜನರನ್ನು ತಿಳಿಯುವ, ಸಂಸ್ಕೃತಿಗಳನ್ನು ಪರಿಚಯಿಸಿಕೊಳ್ಳುವ ಹಾಗೂ ನಮ್ಮನ್ನು ನಾವು ಹೊಸದಾಗಿ ಕಂಡುಕೊಳ್ಳುವ ಜೀವಂತ ಪಾಠಶಾಲೆಯಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಮಾತನಾಡಿ, ಗ್ರಾಮೀಣ ಭಾಗದ ಶಾಲಾ-ಕಾಲೇಜುಗಳು ಹಾಗೂ ಓಣಿಗಳಲ್ಲಿ ಯುವ ಸಮೂಹಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮಕ್ಕಳಲ್ಲಿ ಹಾಗೂ ಯುವಕ-ಯುವತಿಯರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವುದು ಇಂತಹ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.
ಸಾಹಿತಿ ರವಿ ಕಂಗಳ ಕೃತಿ ಪರಿಚಯ ಮಾಡಿದರು. ಡಾ. ಚಂದ್ರಶೇಖರ ಕಾಳನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಇನಾಮದಾರ ಆಶಯ ನುಡಿಗಳನ್ನಾಡಿದರು. ಇದೇ ವೇಳೆ ರಾಷ್ಟರೀಯ ಮಾಜಿ ಸೈನಿಕರ ಸಮನ್ವಯ ಸಮಿತಿ ಕರ್ನಾಟಕ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ನಿಂಗನಗೌಡ್ರ ಅವರಿಗೆ ಪರಿಷತ್ತ ಪರವಾಗಿ ಸನ್ಮಾನಿಸಿದರು.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಗಿರಿಜಾ ವಾಬನ್ನವರ, ಉಪ ಪ್ರಾಚಾರ್ಯ ಗಿರಿಜಾ ನಡುವಿನಮನಿ, ವಿಜಯಲಕ್ಷ್ಮೀ ಮುರನಾಳ ಇತರರಿದ್ದರು. 50ಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ಡಾ.ಬಸವರಾಜ ಕುಂಬಾರ ಅಧ್ಯಕ್ಷತೆ ವಹಿಸಿದ್ದರು.