ಕಂಠಿ ವೃತ್ತದಲ್ಲಿ ಟ್ರಾಫಿಕ್ ಕಿರಿಕಿರಿ

ಇಳಕಲ್ಲದ ಎಸ್.ಆರ್. ಕಂಠಿ ವೃತ್ತದಿಂದ ಗೊರಬಾಳ ನಾಕಾ ಕಡೆಗೆ ಹೋಗುವ ಪ್ರಮುಖ ರಸ್ತೆಯಲ್ಲಿ ಉಂಟಾದ ಟ್ರಾಫಿಕ್ ಜಾಮ್.
ಇಳಕಲ್ಲದ ಎಸ್.ಆರ್. ಕಂಠಿ ವೃತ್ತದಿಂದ ಗೊರಬಾಳ ನಾಕಾ ಕಡೆಗೆ ಹೋಗುವ ಪ್ರಮುಖ ರಸ್ತೆಯಲ್ಲಿ ಉಂಟಾದ ಟ್ರಾಫಿಕ್ ಜಾಮ್.
Published on

ಪ್ರಮುಖ ಮುಖ್ಯಾಂಶಗಳು

  • ಬೇಸತ್ತ ವಾಹನ ಸವಾರರು
ಇಳಕಲ್ಲ: ನಗರದ ಹೃದಯಭಾಗವಾಗಿರುವ ಎಸ್.ಆರ್. ಕಂಠಿ ವೃತ್ತದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು, ವಾಹನ ಸವಾರರು ಹಾಗೂ ಸ್ಥಳೀಯ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಮುಖ ರಸ್ತೆಗಳ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಹಾಗೂ ಬೈಕ್‌ಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.
ಕಂಠಿ ವೃತ್ತದಿಂದ ಗೊರಬಾಳ ನಾಕಾ ಕಡೆಗೆ ಹೋಗುವ ರಸ್ತೆ ಹಾಗೂ ದ್ವಾರಕಾ ಲಾಡ್ಜ್ ಮಾರ್ಗದಲ್ಲಿ ವಾಹನಗಳನ್ನು ಅಕ್ರಮವಾಗಿ ನಿಲ್ಲಿಸುವುದರಿಂದ ಬಸ್‌ಗಳು ಅಥವಾ ದೊಡ್ಡ ವಾಹನಗಳು ಸಂಚರಿಸುವಾಗ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಲ್ಲುವ ಸ್ಥಿತಿ ಉಂಟಾಗುತ್ತಿದೆ. ಇದರಿಂದ ಅರ್ಧಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ನಗರವು ವೇಗವಾಗಿ ವಿಸ್ತರಿಸುತ್ತಿದ್ದರೂ ಹಲವಾರು ರಸ್ತೆಗಳು ಇನ್ನೂ ಕಿರಿದಾಗಿಯೇ ಇರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ವಾಹನ ಸವಾರರ ನಡುವೆ ಮಾತಿನ ಚಕಮಕಿಗಳೂ ಸಾಮಾನ್ಯವಾಗುತ್ತಿವೆ.
ತಲೆ ಕೆಡಿಸಿಕೊಳ್ಳದ ಪೋಲಿಸರು
ರಸ್ತೆಗಳಲ್ಲಿ ಅಕ್ರಮವಾಗಿ ವಾಹನಗಳನ್ನು ನಿಲ್ಲಿಸುವವರ ಮೇಲೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ನಿಯಮ ಪಾಲನೆಗೆ ಹೆಚ್ಚಿನವರು ಗಮನ ಹರಿಸುತ್ತಿಲ್ಲ. ಇದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ. ಸಂಬಂಧಪಟ್ಟ ಅಽಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
"

ಕಂಠಿ ವೃತ್ತವು ವ್ಯಾಪಾರದ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ನಗರಸಭೆಯವರು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಬಹುದು.

| ಚಂದ್ರಶೇಖರ ಕೊಳ್ಳಿ, ಸ್ಥಳೀಯ ನಿವಾಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net