

ಮುಧೋಳ: ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಬಗೆಹರಿಸುವ ಮುಖ್ಯ ಉದ್ದೇಶದಿಂದ ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಪ್ರಜಾಸೇವಾ ಆಂದೋಲನ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.
ತಾಲೂಕಿನ ಮಂಟೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿ ಬಗೆಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ಆನ್‌ಲೈನ್ ಮೂಲಕ ಸರ್ಕಾರದ ಗಮನಕ್ಕೆ ತಂದು, ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಪಿಂಚಣಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಸರಿಪಡಿಸುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಲು ತಾಲೂಕು ಮಟ್ಟದ ಅಽಕಾರಿಗಳು ಗ್ರಾಮಕ್ಕೆ ಬಂದಾಗ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಕಳ್ಳಿಮನಿ ಮಾತನಾಡಿ, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಗತ್ಯ ದಾಖಲೆಗಳ ಸಮೇತ ಅಧಿಕಾರಿಗಳ ಗಮನಕ್ಕೆ ತಂದರೆ ಪರಿಹಾರ ಕಂಡುಕೊಳ್ಳಲು ಹೆಚ್ಚು ನೆರವಾಗುತ್ತದೆ ಎಂದರು.
ಬಹುತೇಕರು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಆದರೆ, ಸಂಬಂಧಿಸಿದ ದಾಖಲೆಗಳನ್ನು ನೀಡದಿರುವುದರಿಂದ ಸಮಸ್ಯೆ ಪರಿಹರಿಸುವುದು ಜಟಿಲವಾಗುತ್ತದೆ. ಆದ್ದರಿಂದ ಅಗತ್ಯ ದಾಖಲೆಗಳೊಂದಿಗೆ ಸಮಸ್ಯೆಗಳನ್ನು ತಿಳಿಸಬೇಕು ಎಂದು ಹೇಳಿದರು.
ಗ್ರೇಡ್-೨ ತಹಸೀಲ್ದಾರ್ ಎ.ಕೆ. ಇಂಡಿಕರ್, ಗ್ರಾಮದ ಮುಖಂಡರಾದ ಬಸವರಾಜ ಪೂಜಾರಿ, ಚನ್ನಪ್ಪ ಬಾಗಲಕೋಟೆ, ಅಡಿವೆಪ್ಪ ಉಳ್ಳಾಗಡ್ಡಿ, ಸುರೇಂದ್ರ ಗೋಲಶೆಟ್ಟಿ, ಪಶುಸಂಗೋಪನೆ ಇಲಾಖೆ ಅಧಿಕಾರಿ ಗೋವಿಂದ ರಾಠೋಡ, ಅರಣ್ಯ ಇಲಾಖೆ ಅಧಿಕಾರಿ ಎಚ್.ಬಿ. ಡೋಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ ಮಲಘಾಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಟಿ. ಪಾಟೀಲ, ರಮೇಶ ನಿಡೋಣಿ, ಡಾ. ಅಶೋಕ ಡಳಜಿ, ಪಿಡಿಒ ರವಿಕುಮಾರ ಬೆಟಗೇರಿ ಇತರರಿದ್ದರು.