ಬೀಳಗಿ: ಜಿಲ್ಲೆಯ ಬೀಳಗಿ ಮತ್ತು ವಿಜಯಪುರ ಜಿಲ್ಲೆಯ ಕೊಲ್ಹಾರ ನಡುವಿನ ಸೇತುವೆ ಮೇಲಿಂದ ಕಷ್ಣಾ ನದಿಗೆ ಟಿಪ್ಪರ್ ಉರುಳಿರುವ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಟಿಪ್ಪರ ಚಾಲಕ ಬೆಣ್ಣೂರ ಗ್ರಾಮದ ಸಂತೋಷ ಕೋಟಿ (31) ಎನ್ನುವವರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಟಿಪರ್ ಸುಪ್ರವೈಜರ್ ಎನ್ನಲಾದ ಬಸವಕಲ್ಯಾಣ ತಾಲೂಕಿನ ಸಂಜು ಮುಳಗಿ ಅವರನ್ನ ಸ್ಥಳೀಯ ಮೀನುಗಾರರು ಪ್ರಾಣಾಪಾಯದಿಂದ ರಕ್ಷಿಸಿ ನದಿಯಿಂದ ಹೊರತಂದಿದ್ದಾರೆ.
ಮೂರು ಕಿ.ಮೀ. ಉದ್ದ ಇರುವ ಈ ಸೇತುವೆ ಮೇಲೆ ಹೊರಟಿದ್ದ ಟಿಪ್ಪರ್ ಹಿಂದಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯನ್ನು ಒಡೆದುಕೊಂಡು ನದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಟಿಪ್ಪರ್ ನಲ್ಲಿ ಚಾಲಕನ ಜೊತೆ ಸುಪ್ರವೈಜರ್ ಸಹ ಇದ್ದರು. ನದಿಗೆ ಉರುಳಿದ ಟಿಪ್ಪರ್ ಸಂಪೂರ್ಣವಾಗಿ ಮುಳುಗಿದ್ದು, ಈ ವೇಳೆ ಸಂಜು ಟಿಪ್ಪರ್ ಮೇಲೆ ನಿಂತು ರಕ್ಷಣೆಗಾಗಿ ಕೂಗಿದ್ದಾರೆ. ಆಗ ಸ್ಥಳೀಯರು ಸೇರಿ ಅವರನ್ನ ರಕ್ಷಿಸಿದ್ದಾರೆ. ಆದರೆ, ಚಾಲಕ ಸಂತೋಷ ಕೋಟಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಬೀಳಗಿ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಚಾಲಕನ ಶೋಧ ಕಾರ್ಯ ನಡೆಸಿದ್ದು, ಇನ್ನು ಪತ್ತೆ ಆಗಿಲ್ಲ. ಸಂಜೆವರೆಗೂ ಶೋಧ ನಡೆಸಿದರೂ ಚಾಲಕ ಪತ್ತೆ ಆಗಿಲ್ಲ. ಗುರುವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ಮುಂದುವರೆಯಲಿದೆ.
ಟಿಪ್ಪರ್ ಗದ್ದನಕೇರಿ ಕ್ರಾಸ್ ನಿಂದ ಕೋಲ್ಹಾರ ಕಡೆಗೆ ಹೊರಟಿತ್ತು. ಸೇತುವೆಯಲ್ಲಿ ಮುಂದೆ ಹೊರಟಿದ್ದ ಕಾರಿಗೆ ಡಿಕ್ಕಿ ಹೊಡೆದು, ಸೇತುವೆಯ ತಡೆಗೋಡೆಯನ್ನು ಒಡೆದುಕೊಂಡು ನದಿಗೆ ಉರುಳಿದೆ.
ಕಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಕೋಲ್ಹಾರ ಸೇತುವೆ ಅಂದಾಜು ಮೂರು ಕಿ.ಮೀ. ಉದ್ದ ಇದ್ದು ರಾಜ್ಯದ ಅತ್ಯಂತ ಉದ್ದನೆಯ ಸೇತುವೆಗಳಲ್ಲಿ ಇದೆ.
ಟಿಪ್ಪರ್ ಡಿಕ್ಕಿ ಹೊಡೆದ ಕಾರಿನಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.