ಜಮಖಂಡಿ ನಗರದ ಅರಣ್ಯ ಇಲಾಖೆ ಕಚೇರಿ ರಸ್ತೆಯ ಮೈದಾನದಲ್ಲಿ ನಡೆದ ರಂಗಕೇಸರಿ ಉತ್ಸವದಲ್ಲಿ ಡಿಜೆ ಸಂಗೀತಕ್ಕೆ ಕುಣಿಯುತ್ತಿರುವ ಯುವಜನತೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಮಖಂಡಿ ರಂಗಕೇಸರಿ ಹೋಳಿ ಸಂಭ್ರಮ
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಯುವಕ-ಯುವತಿಯರು
ಬಣ್ಣದ ಹಬ್ಬಕ್ಕೆ ಉದ್ಯಮಿ ವೀರುಪಾಕ್ಷಯ್ಯ ಗುಡಗುಂಟಿ ಅವರು ಚಾಲನೆ
ಜಮಖಂಡಿ: ನಗರದ ಅರಣ್ಯ ಇಲಾಖೆ ಕಚೇರಿ ರಸ್ತೆಯ ಪಕ್ಕದ ಮೈದಾನದಲ್ಲಿ ಆಯೋಜಿಸಲಾಗಿದ್ದ ರಂಗಕೇಸರಿ ಹೋಳಿ ಉತ್ಸವವು ವೈಭವದಿಂದ ಜರುಗಿತು.
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಯುವಕ-ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಪರಸ್ಪರ ಬಣ್ಣ ಎರಚುತ್ತಾ, ಡಿಜೆ ಸಂಗೀತದ ತಾಳಕ್ಕೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.
ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆದ ಈ ಬಣ್ಣದ ಹಬ್ಬಕ್ಕೆ ಉದ್ಯಮಿ ವೀರುಪಾಕ್ಷಯ್ಯ ಗುಡಗುಂಟಿ ಅವರು ಚಾಲನೆ ನೀಡಿದರು. ವಿವಿಧ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಹಬ್ಬದ ಕಳೆಯನ್ನು ಹೆಚ್ಚಿಸಿದರು.
ಹೋಳಿ ಆಚರಣೆಗಾಗಿ ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ಪ್ರತ್ಯೇಕ ವಿಭಾಗಗಳನ್ನು ಕಲ್ಪಿಸಲಾಗಿತ್ತು. ಇದರಿಂದಾಗಿ ಎಲ್ಲರೂ ಮುಕ್ತವಾಗಿ ಬಣ್ಣದಾಟದಲ್ಲಿ ಪಾಲ್ಗೊಳ್ಳಲು ಅನುಕೂಲವಾಯಿತು. ಡಿಜೆ ಸಂಗೀತದ ಅಬ್ಬರಕ್ಕೆ ಯುವ ಸಮೂಹ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.
ಪರಿಸರ ಕಾಳಜಿಯೊಂದಿಗೆ ಆಚರಿಸಲಾದ ಈ ರಂಗಕೇಸರಿ ಉತ್ಸವಕ್ಕೆ ಮಹಾರಾಷ್ಟ್ರದ ಕೊಲ್ಹಾಪುರದಿಂದ ಅಂದಾಜು 15 ಕ್ವಿಂಟಲ್ ನೈಸರ್ಗಿಕ ಬಣ್ಣಗಳನ್ನು ತರಿಸಲಾಗಿತ್ತು. ಏಳು ವಿವಿಧ ಬಣ್ಣಗಳ ಪರಿಸರ ಪೂರಕ ಪೌಡರ್ ಬಣ್ಣವನ್ನು ಪಾಲ್ಗೊಂಡಿದ್ದ ಎಲ್ಲರಿಗೂ ಉಚಿತವಾಗಿ ವಿತರಿಸುವ ಮೂಲಕ ಪರಿಸರ ಸ್ನೇಹಿ ಹೋಳಿಗೆ ಒತ್ತು ನೀಡಲಾಯಿತು.
ಮೈದಾನದ ಹೊರತಾಗಿ ನಗರದ ಪ್ರಮುಖ ರಸ್ತೆಗಳಲ್ಲೂ ಯುವಕರು ಗುಂಪು ಗುಂಪಾಗಿ ತಮ್ಮ ಸ್ನೇಹಿತರಿಗೆ ಪರಸ್ಪರ ಬಣ್ಣ ಹಚ್ಚಿ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದಾದ್ಯಂತ ಹಬ್ಬದ ವಾತಾವರಣ ಮನೆಮಾಡಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಿಎಸ್‌ಐ ಅನಿಲ್ ಕುಂಬಾರ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಾರ್ವಜನಿಕರು ಶಾಂತಿಯುತವಾಗಿ ಮತ್ತು ಉತ್ಸಾಹದಿಂದ ಹಬ್ಬವನ್ನು ಆಚರಿಸಲು ಪೊಲೀಸ್‌ರು ಸಹಕರಿಸಿದರು.