ಬಾಗಲಕೋಟೆಯಲ್ಲಿ ಮತ್ತೆ ಗದ್ದಲ, ನೂಕಾಟ, ತಳ್ಳಾಟ

ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತರೊಬ್ಬರನ್ನ ಪೊಲೀಸರು ವಶಕ್ಕೆ ಪಡೆದು ಕಾರಿನಲ್ಲಿ ಕರೆದೊಯ್ಯಲು ಮುಂದಾದಾಗ ಸ್ಥಳೀಯರು ವಾಹನಕ್ಕೆ ಮುತ್ತಿಗೆ ಹಾಕಿ ಯುವಕನನ್ನು ಬಿಡಿಸಿಕೊಳ್ಳಲು ಮುಗಿಬಿದ್ದಿರುವುದು.
ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತರೊಬ್ಬರನ್ನ ಪೊಲೀಸರು ವಶಕ್ಕೆ ಪಡೆದು ಕಾರಿನಲ್ಲಿ ಕರೆದೊಯ್ಯಲು ಮುಂದಾದಾಗ ಸ್ಥಳೀಯರು ವಾಹನಕ್ಕೆ ಮುತ್ತಿಗೆ ಹಾಕಿ ಯುವಕನನ್ನು ಬಿಡಿಸಿಕೊಳ್ಳಲು ಮುಗಿಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೂ ಕಾರ್ಯಕರ್ತನ ಬಂಧನಕ್ಕೆ ಮುಂದಾದ ಪೊಲೀಸರು
  • ಅಡ್ಡಗಟ್ಟಿ ನಿಂತು ಕಾರ್ಯಕರ್ತನ ಬಿಡಿಸಿಕೊಂಡ ಮಹಿಳೆಯರು
  • ವಾಹನಕ್ಕೆ ಕಲ್ಲು, ತಗಡಿನ ಶೀಟು ಇಟ್ಟು ಪ್ರತಿಭಟನೆಗೆ ಇಳಿದ ಸ್ಥಳೀಯರು
ಬಾಗಲಕೋಟೆ: ಕಳೆದ ವಾರ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟ ಪ್ರಕರಣ ಶಾಂತವಾಯಿತು ಎನ್ನುವಷ್ಟರಲ್ಲೇ ಮತ್ತೆ ಹಳೇ ಬಾಗಲಕೋಟೆಯಲ್ಲಿ ಶುಕ್ರವಾರ ಸಂಜೆ ಪೊಲೀಸರು ಮತ್ತು ಸ್ಥಳೀಯರು ಹಾಗೂ ಮಹಿಳೆಯರ ನಡುವೆ ಗದ್ದಲ, ಪರಸ್ಪರ ನೂಕಾಟ ಮತ್ತು ತಳ್ಳಾಟ ನಡೆದಿದೆ.
ಶಿವಾಜಿ ಜಯಂತಿ ಹಾಗೂ ನಂತರದಲ್ಲಿ ಬಾಗಲಕೋಟೆ ನಗರದಲ್ಲಿ ನಡೆದಿರುವ ಅಹಿತಕರ ಘಟನೆ ಕಾವು ತಗ್ಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ ಎನ್ನುವಾಗಲೇ ಶುಕ್ರವಾರ ಪೊಲೀಸರ ತಂಡವೂ ಖಾಸಗಿ ವಾಹನ ತೆಗೆದುಕೊಂಡು ಹಳೇ ಬಾಗಲಕೋಟೆಯ ಅಂಬಿಗೇರ ಗಲ್ಲಿಯಲ್ಲಿ ಹಿಂದೂ ಕಾರ್ಯಕರ್ತನನ್ನು ವಶಕ್ಕೆ ಪಡೆದು ಕಾರಿನಲ್ಲಿ ಕರೆದುಕೊಂಡು ಹೋಗಲು ಸಜ್ಜಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಕಾರ್ಯಕರ್ತನ ಕುಟುಂಬದವರ ಜೊತೆಗೆ ಸ್ಥಳೀಯ ನಿವಾಸಿಗಳು ಪೊಲೀಸರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತಿಗೆ ಮಾತು ಬೆಳೆಯುತ್ತಲೇ ಹೋಗಿದ್ದು, ನೋಡ ನೋಡುತ್ತಿದ್ದಂತೆ ನೂರಾರು ಮಹಿಳೆಯರು ಹಾಗೂ ಸ್ಥಳೀಯ ನಿವಾಸಿಗಳು ಜಮಾವಣೆಗೊಂಡು ಪೊಲೀಸರ ವಿರುದ್ಧ ವಾಗ್ವಾದಕ್ಕೆ ಇಳಿದಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ, ಪೊಲೀಸರ ವಾಹನಗಳಿಗೆ ಅಡ್ಡಗಟ್ಟಿ, ವಾಹನದ ಚಕ್ರಗಳಿಗೆ ದೊಡ್ಡ ದೊಡ್ಡ ಕಲ್ಲು, ತಗಡಿನ ಶೀಟುಗಳನ್ನು ಇಟ್ಟು ವಾಹನ ತಡೆದಿದ್ದಾರೆ. ಈ ವೇಳೆ ಮಾತಿನ ಚಕುಮಕಿಯೂ ಜೋರಾಗಿ ನಡೆದಿದೆ. ಮನೆಯಲ್ಲಿ ಮಲಗಿದ್ದ ಯುವಕನ್ನು ಏಕಾಏಕಿ ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾರೆ. ಕಾರಣ ಕೇಳಿದರೂ ನಮಗೆ ಉತ್ತರ ಕೊಡುತ್ತಿಲ್ಲ. ಮಹಿಳೆಯರು ಎನ್ನದೇ ನೂಕಾಟ, ತಳ್ಳಾಟ ನಡೆಸಿದ್ದಾರೆ. ಬಟ್ಟೆ ಸಹ ಹರಿದಿವೆ ಎಂದು ಮಹಿಳೆಯರೊಬ್ಬರು ಕಣ್ಣೀರು ಹಾಕಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದು ಕಂಡು ಬರುತ್ತಿದ್ದಂತೆ ಸ್ಥಳೀಯರ ವಿರೋಧಕ್ಕೆ ಮಣಿದು ಪೊಲೀಸರು ಅಲ್ಲಿಂದ ತೆರಳಿದರು. ಕೆಲ ಹೊತ್ತಿನ ಬಳಿಕ ಮತ್ತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರಿಂದ ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಮಹಿಳೆಯರು ಪೊಲೀಸರನ್ನು ಮಹಿಳೆಯರೂ ತರಾಟೆ ಸಹ ತೆಗೆದುಕೊಂಡರು.
ಹಿಂದೂ ಕಾರ್ಯಕರ್ತ ಮುತ್ತು ಮಾಗಿ ಎನ್ನುವ ಯುವಕನ ಮನೆಗೆ ಹೋಗಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ಕಾರಿನಲ್ಲಿ ಕೂಡಿಸಿಕೊಂಡು ಹೋಗಲು ಮುಂದಾದ ವೇಳೆ ಈ ಎಲ್ಲ ಬೆಳವಣಿಗೆ ನಡೆಯಿತು.
ಡಿಎಸ್ಪಿ ಗಜಾನನ ಸುತಾರ ನೇತೃತ್ವದಲ್ಲಿ ಸಿಪಿಐ, ಪಿಎಸ್‌ಐಗಳು, ಪೊಲೀಸ್ ಕಾನ್ಸ್‌ಟೇಬಲ್‌ಗಳು ಕಾರ್ಯಕರ್ತನನ್ನು ವಶಕ್ಕೆ ಪಡೆಯಲು ತೆರಳಿದ್ದರು. ಪೊಲೀಸರ ಕ್ರಮದ ವಿರುದ್ಧ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಬೀದಿಗೆ ಇಳಿದಿದ್ದರಿಂದ ಕೊನೆಗೆ ಪೊಲೀಸರು ಬಂದ ದಾರಿಗೆ ಸುಂಕ ಇಲ್ಲದಂತೆ ವಾಪಸ್ಸು ತೆರಳಬೇಕಾಯಿತು. ಕೊನೆಗೆ ಯುವಕನನ್ನು ಬಂಧಿಸಲ್ಲ ಎಂದು ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net